ಕಣ್ಣು ಕಾಣಲ್ಲ. ಆದರೆ ಎದುರಿಗೆ ಇರೋ ಪಾತ್ರಧಾರಿಯ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಬೇಕು. ಫೈಟಿಂಗ್.. ನಾಯಿಯ ಜೊತೆ ಆಕ್ಟಿಂಗ್.. ಎಲ್ಲವೂ ಡಿಫರೆಂಟ್. ಫೈಟಿಂಗಿನಲ್ಲೂ ಅಷ್ಟೇ.. ಕಣ್ಣು ಕಾಣದ ಹುಡುಗಿಯ ಸಾಹಸ ಎಂದೇ ಪ್ರೇಕ್ಷಕರು ಫೀಲ್ ಆಗಬೇಕು. ಇದೆಲ್ಲವನ್ನೂ ತೆರೆಯ ಮೇಲೆ ಅದ್ಭುತವಾಗಿ ತೋರಿಸಿ ಗೆದ್ದಿದ್ದಾರೆ ನಿಧಿ.
ನಿಧಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿರುವ ರಾಧಿಕಾ ನಾರಾಯಣ್ ತಮ್ಮ ಪಾತ್ರಕ್ಕೆ ಸಿಗುತ್ತಿರೋ ಪ್ರಶಂಸೆಗೆ ಫುಲ್ ಫಿದಾ. ಒಬ್ಬ ಕಲಾವಿದೆಗೆ ಇಂತಹ ಅವಕಾಶಗಳು ಪದೇ ಪದೇ ಸಿಕ್ಕಲ್ಲ. ಸಿಕ್ಕಾಗ ನ್ಯಾಯ ಸಲ್ಲಿಸಬೇಕು. ನ್ಯಾಯ ಸಲ್ಲಿಸಿರುವ ತೃಪ್ತಿ ಇದೆ ಎಂದಿದ್ದಾರೆ ರಾಧಿಕಾ. ಈ ಚಿತ್ರ ಮತ್ತು ಪಾತ್ರಕ್ಕಾಗಿ ನಿರ್ದೇಶಕ ವಿಲೋಕ್ ಶೆಟ್ಟಿ ಅವರು ಮಾಡಿಸಿದ ತಯಾರಿಯನ್ನೂ ರಾಧಿಕಾ ನೆನಪಿಸಿಕೊಂಡಿದ್ದಾರೆ.
ವಿಲೋಕ್ ಅವರಿಗೆ ತಮ್ಮ ಚಿತ್ರದ ಪ್ರತಿ ಪಾತ್ರ, ದೃಶ್ಯ.. ಎಲ್ಲದರ ಬಗ್ಗೆಯೂ ಹೀಗೇ ಇರಬೇಕು ಅನ್ನೋ ಸ್ಪಷ್ಟತೆ ಇತ್ತು. ಅದಕ್ಕಾಗಿ ವರ್ಕ್‍ಶಾಪ್ ಮಾಡಿಸಿದ್ದರು. ಒಬ್ಬರು ಮೆಂಟರ್ ಇದ್ದರು. ಅಂಧರ ಶಾಲೆಗೆ ಹೋಗಿ ಅಭ್ಯಾಸ ಮಾಢಿದೆ. ಅಲ್ಲಿ ಅಂಧರು ತಮ್ಮ ಎದುರು ಯಾರಾದರೂ ನಿಂತರೆ ಅವರ ಮುಖಕ್ಕೆ ಮುಖ ಕೊಟ್ಟು ಮಾತನಾಡೋ ಸೂಕ್ಷ್ಮವನ್ನು ಗಮನಿಸಿದೆ. ಇದೆಲ್ಲವೂ ಸಹಾಯವಾಯಿತು ಎಂದಿದ್ದಾರೆ ರಾಧಿಕಾ.
ಒಂದು ಕೊಲೆ, ಒಂದು ಆಕ್ಸಿಡೆಂಟ್, ಪ್ರೇಕ್ಷಕನ ನಿರೀಕ್ಷೆಯನ್ನು ಪ್ರತಿ ಸಲವೂ ಉಲ್ಟಾಪಲ್ಟಾ ಮಾಡುವ ತಿರುವುಗಳು.. ಎಲ್ಲವೂ ಪ್ರೇಕ್ಷಕರಿಗೆ ಥ್ರಿಲ್ ಕೊಟ್ಟಿರೋದು ಈ ಚಿತ್ರದ ವಿಶೇಷ. ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಪ್ರತಿಕ್ರಿಯೆ ನೋಡಿದರೆ ಚೇಸ್ ಸಖತ್ ಹಿಟ್ ಆಗುವ ನಿರೀಕ್ಷೆಯನ್ನಂತೂ ಸೃಷ್ಟಿಸಿದೆ.