ಪೆಟ್ರೋಮ್ಯಾಕ್ಸ್ ಚಿತ್ರದ ಟ್ರೇಲರ್ ರಿಲೀಸ್ ಆದ ನಂತರ ಎಲ್ಲರೂ ಅದೊಂದು ದೃಶ್ಯದ ಬಗ್ಗೆಯೇ ಮಾತನಾಡುತ್ತಿದ್ದಾರೆ. ನೀನಾಸಂ ಸತೀಶ್ ಮತ್ತು ಹರಿಪ್ರಿಯಾ ನಡುವಿನ `ಆಟ ಮುಗಿದ ಮೇಲೆ' ನಡೆಯೋ ಬೆಡ್‍ರೂಂ ದೃಶ್ಯ ಮತ್ತು ಆ ದೃಶ್ಯದ ಸಂಭಾಷಣೆಯ ಬಗ್ಗೆಯೇ ಚರ್ಚೆ ಶುರುವಾಗಿದೆ. ಅಯ್ಯೋ.. ಅಂತಾ ಸೀನ್ ಬೇಕಿತ್ತಾ..? ತುಂಬಾ ಅಶ್ಲೀಲವಾಗಿದೆ.. ಎಂದು ಕೆಲವರು ಹೇಳಿದರೆ.. ಅದಕ್ಕೆ ವಿರುದ್ಧವಾಗಿ ಸೀನ್ ರೊಮ್ಯಾಂಟಿಕ್ ಆಗಿದೆ ಎನ್ನುವವರೂ ಇದ್ದಾರೆ. ಇಷ್ಟಕ್ಕೂ ಪೆಟ್ರೋಮ್ಯಾಕ್ಸ್‍ನ ಆ ಸೀನ್ ಬಗ್ಗೆ ಹರಿಪ್ರಿಯಾ ಕೂಡಾ ಮಾತನಾಡಿದ್ದಾರೆ.
ಆ ಸೀನ್ ವೈರಲ್ ಆಗಿರೋದು ಖುಷಿಯನ್ನೇ ಕೊಟ್ಟಿದೆ. ಸಿನಿಮಾ ನೋಡಿದ ಮೇಲೆ ಆ ದೃಶ್ಯ ಏನು ಎನ್ನೋದು ಎಲ್ಲರಿಗೂ ಅರಿವಾಗುತ್ತೆ. ನಾನಂತೂ ಡೈರೆಕ್ಟರ್ ಹೇಳಿದರು ಎಂಬ ಕಾರಣಕ್ಕೆ ಅಂತಹ ದೃಶ್ಯ ಮಾಡೋದಿಲ್ಲ. ಚಿತ್ರ ಮತ್ತು ಕಥೆಗೆ ಆ ದೃಶ್ಯ ಎಷ್ಟು ಮುಖ್ಯ ಅನ್ನೋದು ತಿಳಿದುಕೊಂಡೇ ಆ್ಯಕ್ಟ್ ಮಾಡುತ್ತೇನೆ. ಮೊದಲು ಸಿನಿಮಾ ನೋಡಿ ಅನ್ನೋದು ಹರಿಪ್ರಿಯಾ ಮಾತು.
ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಮೀನಾಕ್ಷಿ. ರಿಯಲ್ ಎಸ್ಟೇಟ್ ಏಜೆಂಟ್ ಕ್ಯಾರೆಕ್ಟರ್. ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಹೆಣ್ಣು ಮಗಳೊಬ್ಬಳ ಕಲ್ಪನೆಯೇ ವಿಶಿಷ್ಟವಾದದ್ದು. ಇನ್ನು ಇಡೀ ಚಿತ್ರದ ಎಲ್ಲ ಪಾತ್ರಗಳಿಗೂ ಕನೆಕ್ಟ್ ಮಾಡಿಸುವ ಪಾತ್ರ ನನ್ನದು. ಲುಕ್ ಕೂಡಾ ಬೇರೆಯೇ ಇದೆ. ಡೈಲಾಗ್ಸ್ ಸಖತ್ ಆಗಿವೆ ಎಂದಿರೋ ಹರಿಪ್ರಿಯಾಗೆ ವಿಜಯ್ ಪ್ರಸಾದ್ ಅವರ ಮೇಲೆ ನಂಬಿಕೆಯೂ ಇದೆ. ಹಿಟ್ ಜೋಡಿ ವರ್ಕೌಟ್ ಆಗುತ್ತೆ ಅನ್ನೋ ಭರವಸೆಯೂ ಇದೆ.
ಈ ಹಿಂದೆ ಹರಿಪ್ರಿಯಾ ವಿಜಯ್ ಪ್ರಸಾದ್ ಅವರ ಜೊತೆ ನೀರ್ ದೋಸೆ ಸಿನಿಮಾ ಮಾಡಿದ್ದರು. ಅದೂ ಕೂಡಾ ಅಷ್ಟೇ ಬೋಲ್ಡ್ ಕ್ಯಾರೆಕ್ಟರ್. ಈಗ ಮತ್ತೊಮ್ಮೆ ವಿಜಯ್ ಪ್ರಸಾದ್ ಅವರ ನಿರ್ದೇಶನದಲ್ಲಿ ನಟಿಸಿದ್ದಾರೆ. ಟ್ರೇಲರ್ ನೋಡಿದರೆ.. ಇಲ್ಲಿಯೂ ಹಾಟ್ ಹಾಟ್ ಸೀನ್ ಮತ್ತು ಡೈಲಾಗ್ ಇದ್ದೇ ಇರುತ್ತವೆ ಅನ್ನೋದು ಗೊತ್ತಾಗುತ್ತಿದೆ. ಇದೆಲ್ಲದರ ನಡುವೆಯೂ ಒಂದು ಫಿಲಾಸಫಿ ಹೇಳೊದ್ರಲ್ಲಿ ವಿಜಯ್ ಪ್ರಸಾದ್ ಎತ್ತಿದ ಕೈ. ಹೀಗಾಗಿ ಈ ವಾರ ರಿಲೀಸ್ ಆಗುತ್ತಿರೋ ಪೆಟ್ರೋಮ್ಯಾಕ್ಸ್ ಬಗ್ಗೆ ಭಾರಿ ನಿರೀಕ್ಷೆಗಳಿವೆ.