ವಿಕ್ರಾಂತ್ ರೋಣ ಚಿತ್ರ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯವೇ. ಕನ್ನಡದಲ್ಲಷ್ಟೇ ಅಲ್ಲ, ಏಕಕಾಲಕ್ಕೆ ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಇಂಗ್ಲಿಷ್‍ನಲ್ಲೂ ರಿಲೀಸ್ ಆಗುತ್ತಿರುವುದೂ ಗೊತ್ತು. ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ದೊಡ್ಡ ಮಟ್ಟದಲ್ಲಿ ವಿಶ್ವಮಟ್ಟದಲ್ಲಿ ರಿಲೀಸ್ ಆಗುತ್ತಿದೆ. 3ಡಿ ವರ್ಷನ್‍ನಲ್ಲೂ ಬರುತ್ತಿದೆ. ಸುದೀಪ್ ಅವರಂತೂ ಎಕ್ಸೈಟ್ ಆಗಿದ್ದಾರೆ. ಅದಕ್ಕೆ ತಕ್ಕಂತೆ ರಾರಾ ರಕ್ಕಮ್ಮ ಹಾಡು ಯಕ್ಕಾ ಸಕ್ಕಾ ಹಿಟ್ ಆಗಿಬಿಟ್ಟಿದೆ.
ಹೀಗಿರುವಾಗಲೇ ಸ್ವತಃ ಸುದೀಪ್ ಚಿತ್ರದ ಇನ್ನೊಂದು ಸೀಕ್ರೆಟ್ ಹೇಳಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಈ 6 ಭಾಷೆಗಳಲ್ಲಷ್ಟೇ ಅಲ್ಲ, ಮ್ಯಾಂಡರಿನ್(ಚೀನಾ), ಅರೇಬಿಕ್, ಜರ್ಮನ್, ಸ್ಪಾನಿಷ್ ಭಾಷೆಗಳಿಗೂ ಡಬ್ ಆಗಲಿದೆಯಂತೆ. ಆದರೆ, ಹಾಡುಗಳು ಮಾತ್ರ ಕನ್ನಡದಲ್ಲೇ ಇರಲಿವೆಯಂತೆ. ಇದು ಬೇರೆಯದೇ ಫೀಲ್ ಕೊಡೋ ಸಿನಿಮಾ. ಸಿನಿಮಾ ಮುಗಿಸಿ ಹೊರಬರುವಾಗ ಪ್ರೇಕ್ಷಕ ವಿಕ್ರಾಂತ್ ರೋಣನನ್ನು ಎದೆಯಲ್ಲಿಟ್ಟುಕೊಂಡು ಬರುತ್ತಾನೆ ಎಂದಿದ್ದಾರೆ ಸುದೀಪ್. ಅಂದಹಾಗೆ ಕಾಡು, ತಂದೆ ಮಗಳ ಬಾಂಧವ್ಯ, ರೋಚಕತೆ ಇರೋ ಸಿನಿಮಾ ಇದು ಎಂದಿದ್ದಾರೆ ಕಿಚ್ಚ.