ಇದುವರೆಗೆ ಹೀರೋ ಆಗಿದ್ದ ಟೈಗರ್ ಪ್ರಭಾಕರ್ ಪುತ್ರ ಇನ್ನು ಮುಂದೆ ನಿರ್ಮಾಪಕರಾಗುತ್ತಿದ್ದಾರೆ. ಮರಿ ಟೈಗರ್ ವಿನೋದ್ ಪ್ರಭಾಕರ್ ಟೈಗರ್ ಟಾಕೀಸ್ ಅನ್ನೋ ಪ್ರೊಡಕ್ಷನ್ ಸಂಸ್ಥೆ ಹುಟ್ಟು ಹಾಕಿ ಲಂಕಾಸುರ ಚಿತ್ರ ನಿರ್ಮಿಸುತ್ತಿರೋದು ಗೊತ್ತಿದೆಯಷ್ಟೇ. ಪತಿಯ ನಿರ್ಮಾಣದ ಕನಸಿಗೆ ಬೆಂಬಲವಾಗಿ ನಿಂತಿರೋದು ನಿಶಾ ವಿನೋದ್. ಅಧಿಕೃತವಾಗಿ ಲಂಕಾಸುರ ಚಿತ್ರಕ್ಕೆ ಅವರೇ ಪ್ರೊಡ್ಯೂಸರ್. ಇತ್ತೀಚೆಗೆ ಲಂಕಾಸುರ ಚಿತ್ರದ ಟೀಸರ್ ಮತ್ತು ಟೈಗರ್ ಟಾಕೀಸ್ ಲೋಗೋವನ್ನು ಬಿಡುಗಡೆ ಮಾಡಲಾಯಿತು. ರವಿಚಂದ್ರನ್, ದೇವರಾಜ್, ಅಭಿಷೇಕ್ ಅಂಬರೀಷ್, ರವಿಶಂಕರ್, ಉಮೇಶ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದ್ದು ವಿಶೇಷವಾಗಿತ್ತು.
ನನಗೆ ಪ್ರಭಾಕರ್ ಯಾವತ್ತಿಗೂ ಪ್ರೇಮಲೋಕದ ಪ್ರಿನ್ಸಿಪಾಲ್. ಅವರ ತೊಡೆ ಮೇಲೆ ಕುಳಿತು ಬೆಳೆದವನು ನಾನು. ಈಗ ವಿನೋದ್ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ನನ್ನ ಮಕ್ಕಳು ಮಾಡಿದ್ದಷ್ಟೇ ಖುಷಿ ಇದೆ. ಶುಭವಾಗಲಿ ಎಂದರು ರವಿಚಂದ್ರನ್.
ನನಗೆ ಫೈಟಿಂಗ್ ಹೇಳಿಕೊಟ್ಟಿದ್ದೇ ಪ್ರಭಾಕರ್. ವಿನೋದ್ ಏನು ಕೇಳಿದರೂ ಇಲ್ಲ ಎನ್ನಲಾರೆ. ಚಿತ್ರದಲ್ಲಿ ನಾನು ಡಾನ್ ಪಾತ್ರ ಮಾಡಿದ್ದೇನೆ. ಟೈಗರ್ ಟಾಕೀಸ್ ಪ್ರತಿಷ್ಠಿತ ಸಂಸ್ಥೆಯಾಗಲಿ ಎಂದು ಹಾರೈಸಿದರು ದೇವರಾಜ್.
ಇಷ್ಟು ದಿನ ತೋರಿಸಿದ ಪ್ರೀತಿಯನ್ನು ಇನ್ನು ಮುಂದೆಯೂ ತೋರಿಸಿ ಎಂದು ಕೇಳಿಕೊಂಡರು ನಿಶಾ.
ಮರಿ ಟೈಗರ್ ಪ್ರಭಾಕರ್ ಕನಸೊಂದು ಕಣ್ಣು ಬಿಟ್ಟಿದೆ. ಆ ಕನಸು ದೊಡ್ಡ ಮಟ್ಟಕ್ಕೆ ಬೆಳೆಯಲಿ.