ಇತ್ತೀಚೆಗೆ ಧರ್ಮ ಸಂಘರ್ಷಗಳು ಹೆಚ್ಚುತ್ತಲೇ ಹೋಗುತ್ತಿವೆ. ಕೆಲವು ಧರ್ಮದ ಯಾವುದೇ ವಿಷಯಗಳನ್ನು ಮುಟ್ಟುವುದಕ್ಕೂ ಹೆದರುವ ಸಿನಿಮಾ ಇಂಡಸ್ಟ್ರಿ, ಹಿಂದೂ ಧರ್ಮ ಹಾಗೂ ದೇವರ ವಿಷಯ ಬಂದಾಗ ಸ್ವಾತಂತ್ರ್ಯ ಅನುಭವಿಸುತ್ತಾರೆ. ಈಗ ಅಂಥಹುದೇ ವಿವಾದಕ್ಕೆ ಸಿಲುಕಿರುವುದು ಕಾಳಿ ಅನ್ನೋ ಡಾಕ್ಯುಮೆಂಟರಿ. ಈ ಕಾಳಿ ಡಾಕ್ಯುಮೆಂಟರಿಯ ಪೋಸ್ಟರಿನಲ್ಲಿ ಕಾಳಿ ಮಾತೆಯ ವೇಷಧಾರಿ ಸಿಗರೇಟು ಸೇದುತ್ತಿರುವಂತೆ ತೋರಿಸಿದ್ದಾರೆ. ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರ ಧ್ವಜ. ಕಾಳಿ ಮಾತೆಯ ವೇಷ ಹಾಕಿಕೊಂಡವರನ್ನು ಈ ರೀತಿ ತೋರಿಸುವ ಮೂಲಕ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.
ಈ ಡಾಕ್ಯುಮೆಂಟರಿ ಕೆನಡಾದ ಟೊರಂಟೋ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಚಿತ್ರದ ನಿರ್ದೇಶಕಿಯ ಹೆಸರು ಲೀನಾ ಮಣಿಮೇಕಲೈ.ತಮಿಳುನಾಡಿನವರು. ನಟಿ. ಕವಿ. ನಿರ್ದೇಶಕಿ. ಸದ್ಯಕ್ಕೆ ಲೀನಾ ವಿರುದ್ಧ ಪೊಲೀಸ್ ದೂರು ನೀಡಲಾಗಿದ್ದು, ಎಫ್ಐಆರ್ ಕೂಡಾ ಹಾಕಲಾಗಿದೆ. ಇದೇ ಮೊದಲ ಬಾರಿಗೆ ಭಾರತೀಯ ರಾಯಭಾರಿ ಕಚೇರಿ ಕೆನಡಾಕ್ಕೆ ಆಕ್ಷೇಪಣೆ ಸಲ್ಲಿಸಿದೆ. ಚಿತ್ರೋತ್ಸವದಲ್ಲಿ ಕಾಳಿ ಚಿತ್ರ ಪ್ರದರ್ಶನ ಮಾಡದಂತೆ ಒತ್ತಾಯಿಸಿದೆ.
ಆದರೆ ಲೀನಾ ಮಣಿಮೇಕಲೈ ಇದಕ್ಕೆಲ್ಲ ಡೋಂಟ್ ಕೇರ್ ಎಂದಿದ್ದಾರೆ. ಕಳೆದುಕೊಳ್ಳೋಕೆ ನನ್ನ ಬಳಿ ಏನೂ ಇಲ್ಲ. ಇದರ ಬೆಲೆ ನನ್ನ ಪ್ರಾಣ ಅನ್ನೋದಾದರೆ ಕಳೆದುಕೊಳ್ಳೋಕೆ ನಾನು ಸಿದ್ಧ ಎಂದಿದ್ದಾರೆ ಲೀನಾ. ಅಲ್ಲಿಗೆ ಕ್ಷಮೆ ಕೇಳಲ್ಲ. ಪೋಸ್ಟರ್ ತೆಗೆಯೋಲ್ಲ ಎಂದು ನೇರವಾಗಿ ಸವಾಲ್ ಹಾಕಿದ್ದಾರೆ. ಅಲ್ಲದೆ ಈ ಡಾಕ್ಯುಮೆಂಟರಿ ನೋಡಿದರೆ ಈಗ ಅರೆಸ್ಟ್ ಲೀನಾ ಎನ್ನುತ್ತಿರುವವರೇ ಲೀನಾ ಅವರನ್ನು ಅಭಿನಂದಿಸುತ್ತಾರಂತೆ. ಅದು ಲೀನಾ ಮಣಿಮೇಕಲೈಗೆ ಇರೋ ಭರವಸೆ.