ಕಿರುತೆರೆಯಲ್ಲಿ ನಮಿತಾ ರಾವ್ ಮತ್ತು ವಿಕ್ರಂ ಸೂರಿಯವರದ್ದು ದೊಡ್ಡ ಹೆಸರು. ರಂಗಭೂಮಿಯಲ್ಲೂ ಫೇಮಸ್ ಆಗಿರುವ ಜೋಡಿ ಇದು. ಈಗ ನಮಿತಾ ರಾವ್ ನಿರ್ಮಾಪಕಿಯಾಗಿ ಪತಿ ವಿಕ್ರಂ ಸೂರಿ ನಿರ್ದೇಶನಕ್ಕೆ ಸಾಥ್ ಕೊಟ್ಟಿದ್ದಾರೆ. ಆ ಚಿತ್ರವೇ ಚೌಕಾಬಾರ.
ಚೌಕಾಬಾರ ಚಿತ್ರದ ಹಾಡುಗಳನ್ನು ಸಚಿವ ಎಸ್.ಟಿ.ಸೋಮಶೇಖರ್ ಬಿಡುಗಡೆ ಮಾಡಿದ್ದಾರೆ. ಕವಿಗಳಾದ ಹೆಚ್.ಎಸ್.ವೆಂಕಟೇಶ ಮೂರ್ತಿ, ಬಿ.ಆರ್.ಲಕ್ಷ್ಮಣರಾವ್ ಸಮ್ಮುಖದಲ್ಲಿ ನಡೆದ ಚೌಕಾಬಾರ ಆಡಿಯೋ ಕಾರ್ಯಕ್ರಮ ಸರಳ ಸುಂದರವಾಗಿತ್ತು. ಲಹರಿ ವೇಲು, ಗುರುಕಿರಣ್, ಬಾಮಾ ಹರೀಶ್, ನಿರ್ಮಾಪಕರಾದ ಶಿವಕುಮಾರ್, ನಿರ್ದೇಶಕರಾದ ಶೇಷಾದ್ರಿ, ಶಶಿಧರ್ ಕೋಟೆ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮವದು.
ಮಣಿ ಆರ್.ರಾವ್ ಅವರ ಕಾದಂಬರಿ ಆಧರಿಸಿದ ಚಿತ್ರ. ಕಾದಂಬರಿ ಆಧರಿತ ಚಿತ್ರಗಳು ಕಣ್ಮರೆಯಾಗುತ್ತಿರೋ ಸಂದರ್ಭದಲ್ಲಿ ನಮಿತಾ ರಾವ್ ಹೊಸ ಕಥೆಗೆ ಮನಸ್ಸು ಕೊಟ್ಟು ಸಿನಿಮಾ ಮಾಡಿದ್ದಾರೆ. ಅಶ್ವಿನ್ ಪಿ.ಕುಮಾರ್ ಸಂಗೀತ ನೀಡಿದ್ದರೆ, ಲಕ್ಷ್ಮಣರಾವ್, ಹೆಚ್.ಎಸ್.ವೆಂಕಟೇಶ್ ಮೂರ್ತಿ, ವಿಕ್ರಂ ಸೂರಿ, ಹರೀಶ್ ಭಟ್ ಹಾಡುಗಳನ್ನು ಬರೆದಿದ್ದಾರೆ.