ಝೈದ್ ಖಾನ್ ನಟಿಸಿರೋ ಬನಾರಸ್ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಬಹುಶಃ ಸೆಪ್ಟೆಂಬರ್‍ನಲ್ಲಿ ಸಿನಿಮಾ ರಿಲೀಸ್ ಆಗಬಹುದು. ಝೈದ್ ಖಾನ್ ಅವರನ್ನು ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಲಾಂಚ್ ಮಾಡುತ್ತಿರೋದು ಖ್ಯಾತ ನಿರ್ದೇಶಕ ಜಯತೀರ್ಥ. ಒಲವೇ ಮಂದಾರ, ಟೋನಿ, ಬ್ಯೂಟಿಫುಲ್ ಮನಸುಗಳು, ಬೆಲ್`ಬಾಟಂ, ಬುಲೆಟ್ ಬಸ್ಯಾ.. ಹೀಗೆ ಒಂದಕ್ಕಿಂತ ಒಂದು ವಿಭಿನ್ನ ಕಥೆಗಳ ಚಿತ್ರಗಳನ್ನು ನಿರ್ದೇಶಿಸಿ ಬಾಕ್ಸಾಫೀಸ್‍ನಲ್ಲೂ ಗೆದ್ದಿರುವ ನಿರ್ದೇಶಕ ಜಯತೀರ್ಥ. ಈಗ ಬನಾರಸ್ ಮೂಲಕ ಬರುತ್ತಿದ್ದಾರೆ.
ಅಂದಹಾಗೆ ಝೈದ್ ಖಾನ್, ಮಾಜಿ ಸಚಿವ ಜಮೀರ್ ಖಾನ್ ಅವರ ಮಗ. ಹೀಗಾಗಿ ಜಯತೀರ್ಥ ಅವರಿಗೂ ಒಂದು ಆತಂಕವಿತ್ತಂತೆ. ಶ್ರೀಮಂತಿಕೆ, ವರ್ಚಸ್ಸು ಎರಡೂ ಇರುವ ಹುಡುಗ. ಆಕ್ಟಿಂಗ್ ಹೇಗೆ ತೆಗೆಸಬೇಕೋ ಅನ್ನೋ ಆತಂಕವಿದ್ದದ್ದು ನಿಜ. ಆದರೆ ಝೈದ್ ಖಾನ್‍ರದ್ದು ಚಪ್ಪಲಿ ದೂರ ಇಟ್ಟು ಹತ್ತಿರ ಕೂರುವ ಸರಳ ಹುಡುಗ. ಆತನ ಸಿನಿಮಾ ಪ್ರೀತಿ ಇಷ್ಟವಾಯಿತು. ಖಂಡಿತಾ ಝೈದ್ ಖಾನ್ ಒಳ್ಳೆಯ ಕಲಾವಿದ ಆಗ್ತಾನೆ ಎಂದು ಮೆಚ್ಚಿಕೊಂಡಿದ್ದಾರೆ ಜಯತೀರ್ಥ.
ನಟಿ ಸೋನಲ್ ಮಂಥೆರೋ ಕೂಡಾ ಇದೇ ಮಾತು ಹೇಳಿದ್ದಾರೆ. ಬನಾರಸ್ ಚಿತ್ರದ ಹಾಡು ಬಿಡುಗಡೆ ಮಾಡಿದ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಚಿತ್ರತಂಡ ಬನಾರಸ್ ಚಿತ್ರದ ವಿಶೇಷತೆಗಳನ್ನೂ ಹಂಚಿಕೊಂಡಿದೆ.
ನಾನು ಚಿತ್ರರಂಗಕ್ಕೆ ಬರೋದು ಮನೆಯವರಿಗೆ ಇಷ್ಟ ಇರಲಿಲ್ಲ. ಹೀಗಾಗಿ ನನಗೆ ಸಪೋರ್ಟ್ ಮಾಡಿದ್ದು ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್. ಮುಂಬೈನಲ್ಲಿ ನಟನೆಯ ಸ್ಕೂಲಿಗೆ ಸೇರಿಸಿದ್ದೂ ಅವರೇ. ನನ್ನ ಗಾಡ್‍ಫಾದರ್ ಕೂಡಾ ಅವರೇ ಎಂದರು ಝೈದ್ ಖಾನ್.