ಶಿವಣ್ಣ ಸಾಮಾನ್ಯವಾಗಿ ಕೋಪ ಮಾಡಿಕೊಳ್ಳಲ್ಲ. ಅಭಿಮಾನಿಗಳು ಮೈಮೇಲೆ ಬಿದ್ದರೂ ಶಾಂತವಾಗಿರುತ್ತಾರೆ. ಒಳ್ಳೆ ಮೂಡಿನಲ್ಲಿದ್ದರಂತೂ ಅಭಿಮಾನಿಗಳ ಜೊತೆ ಶಿವಣ್ಣ ಬೆರೆಯುವ ಚೆಂದವೇ ಬೇರೆ. ಆದರೆ, ಅದು ಅತಿರೇಕಕ್ಕೆ ಹೋದಾಗ ಶಿವಣ್ಣ ಹಿಂದೆ ಮುಂದೆ ನೋಡದೆ ತರಾಟೆಗೆ ತೆಗೆದುಕೊಳ್ತಾರೆ. ಚಾಮರಾಜನಗರದಲ್ಲಿ ಬೈರಾಗಿ ಚಿತ್ರದ ಪ್ರಚಾರದ ವೇಳೆ ಆಗಿದ್ದೂ ಇದೆ.
ಶಿವಣ್ಣ ಮಾತನಾಡಲು ಶುರು ಮಾಡುತ್ತಿದ್ದಂತೆ ಅಭಿಮಾನಿಗಳು ಅಪ್ಪು ಅಪ್ಪು ಎಂದು ಕೂಗೋಕೆ ಶುರು ಮಾಡಿದರು. ಸ್ವಲ್ಪ ಹೊತ್ತು ಮಾತು ನಿಲ್ಲಿಸಿದ ಶಿವಣ್ಣ ಮತ್ತೆ ಮಾತನಾಡೋಕೆ ಶುರು ಮಾಡಿದಾಗಲೂ ಇದು ರಿಪೀಟ್ ಆಯ್ತು. ಅದರಲ್ಲೂ ಕೆಲವರ ಅಪ್ಪು.. ಅಪ್ಪೂ.. ಕೂಗಿನಿಂದಾಗಿ ಮಾತೇ ಕೇಳಿಸದ ವಾತಾವರಣ ನಿರ್ಮಾಣವಾಯ್ತು. ಆಗ ಶಿವಣ್ಣ ಗರಂ ಆದರು. ಏಕವಚನಕ್ಕೂ ತಿರುಗಿತು.
ಏಯ್.. ಸುಮ್ಮನೆ ಕೂತ್ಕೊಳ್ಳೋಲೇ.. ನೀನು ಅವನನ್ನ ಈಗ ನೋಡಿದ್ದೀಯ. ನಾನು ಅವನನ್ನ ಚಿಕ್ಕಂದಿನಿಂದ ನೋಡಿದ್ದೇನೆ. ಅವನದ್ದು ನನ್ನದು ಒಂದೇ ರಕ್ತ. ಪ್ರೀತಿ ಹೃದಯದಲ್ಲಿರಲಿ, ಗಂಟಲು ದಾಟಬಾರದು. ಕೂಗುವುದು, ಕಿರುಚುವುದೇ ಅಭಿಮಾನವಲ್ಲ ಎಂದರು ಶಿವಣ್ಣ.
ಚಾಮರಾಜನಗರ ನನ್ನ ಮನೆ. ತವರು ಮನೆ. ಬೈರಾಗಿ ಚಿತ್ರವನ್ನು ಎಲ್ಲರೂ ನೋಡಿ. 25ನೇ ದಿನದ ಆಚರಣೆಗೆ ಇದೇ ಚಾಮರಾಜನಗರಕ್ಕೆ ಮತ್ತೆ ಬರುತ್ತೇನೆ ಎಂದರು ಶಿವಣ್ಣ.
ಶಿವಣ್ಣ ಜೊತೆ ಡಾಲಿ, ಪೃಥ್ವಿ, ಕೃಷ್ಣ ಸಾರ್ಥಕ್ ಎಲ್ಲರೂ ಇದ್ದರು.