ಡಾಲಿ ಧನಂಜಯ, ಶಿವಣ್ಣ ಅವರ ಜೊತೆ ಕೇವಲ ಸಹನಟನಲ್ಲ. ಅಭಿಮಾನಿಯಲ್ಲ. ಅದನ್ನೂ ಮೀರಿದ ಬಾಂಧವ್ಯ ಇಟ್ಟುಕೊಂಡವರು. ತಮ್ಮ ಮೊದಲ ಚಿತ್ರ ಬಡವ ರಾಸ್ಕಲ್ ಸಿನಿಮಾವನ್ನು ಗೀತಾ ಶಿವರಾಜಕುಮಾರ್ ಅವರ ಮೂಲಕ ಅರ್ಪಣೆ ಮಾಡಿದ್ದ ಡಾಲಿ, ಅಂತಾದ್ದೊಂದು ಅಭಿಮಾನ ಸುಮ್ಮನೆ ಬರಲ್ಲ. ಆ ರೀತಿ ಶಿವಣ್ಣ ನಮ್ಮ ಜೊತೆ ಇದ್ದಾರೆ ಎಂದಿದ್ದರು. ಈಗ ಡಾಲಿ ಒಂದು ವಿಷಯ ಕೇಳಿದ್ದಾರೆ. ಅದಕ್ಕೆ ಶಿವಣ್ಣ ಸ್ಥಳದಲ್ಲೇ ಯೆಸ್ ಎಂದಿದ್ದಾರೆ.
ಬೈರಾಗಿ ಚಿತ್ರದ ರಥಯಾತ್ರೆ ಮೈಸೂರು ತಲುಪಿದಾಗ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದ ಶಿವಣ್ಣ ಈ ಚಿತ್ರದಲ್ಲಿ ಡಾಲಿ ಮತ್ತು ನಾನು ಟಗರು ನಂತರ ಮತ್ತೊಮ್ಮೆ ಜೊತೆಯಾಗಿದ್ದೇವೆ. ಈ ಚಿತ್ರದಲ್ಲೂ ಒಳ್ಳೆಯ ಡೈಲಾಗ್ಸ್ ಇದೆ. ಸಿಂಪಲ್ಲಾಗ್ ಇರೋದ್ ನೋಡಿ ಡಮ್ಮಿ ಪೀಸ್ ಅಂದ್ಕೊಂಡ್ರಾ ಅನ್ನೋ ತರದ ಪಂಚಿಂಗ್ ಲೈನ್ಸ್ ಇವೆ. ವಿಜಯ್ ಮಿಲ್ಟನ್ ನಮ್ಮೆಲ್ಲರ ಪಾತ್ರವನ್ನೂ ಚೆನ್ನಾಗಿ ಹೆಣೆದಿದ್ದಾರೆ. ಚಿತ್ರದಲ್ಲಿ ನಾನು, ಡಾಲಿ, ಶಶಿಕುಮಾರ್, ವಿನೋದ್ ಆಳ್ವಾ, ಪೃಥ್ವಿ.. ಎಲ್ಲರೂ ಇದ್ದಾರೆ. ಆದರೆ ಚಿತ್ರದ ಹೀರೋ ಚಿತ್ರದ ಕಥೆ ಎಂದಿದ್ದಾರೆ ಶಿವಣ್ಣ. ಜೊತೆಗೆ ಕೈಲಿ 9 ಚಿತ್ರಗಳಿವೆ. ಹೀಗಾಗಿ ಡೈರೆಕ್ಷನ್ ಮಾಡೋ ಆಸೆ ಇಲ್ಲ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಡಾಲಿ ಧನಂಜಯ್ ಇದು ಟಗರು ನಂತರ ಶಿವಣ್ಣ ಜೊತೆ ಇದು ನನಗೆ 2ನೇ ಸಿನಿಮಾ. ಸದ್ಯಕ್ಕೆ ನನಗೂ ನಿರ್ದೇಶನ ಮಾಡೋ ಆಸೆ ಇಲ್ಲ. ಆದರೆ ಶಿವಣ್ಣಂಗೆ ನಿರ್ದೇಶನ ಮಾಡಿ ಆ ಚಿತ್ರದ ನಿರ್ಮಾಣವನ್ನೂ ನಾನೇ ಮಾಡಬೇಕು ಅನ್ನೋ ಆಸೆ ಇದೆ ಎಂದಾಗ ತಕ್ಷಣ ಶಿವಣ್ಣ ನೀನು ಕೇಳಿದ ಕೂಡಲೇ ಡೇಟ್ ಕೊಡ್ತೇನೆ. ಖುಷಿಯಿಂದ ಸಿನಿಮಾ ಮಾಡೋಣ ಎಂದೇ ಬಿಟ್ಟರು.
ಕೃಷ್ಣಸಾರ್ಥಕ್ ನಿರ್ಮಾಣದ ಬೈರಾಗಿ ಜುಲೈ 1ಕ್ಕೆ ರಿಲೀಸ್ ಆಗುತ್ತಿದ್ದು, ಇಂದು ಚಾಮರಾಜನಗರದಲ್ಲಿ ಬೈರಾಗಿ ಹಬ್ಬ ಇದೆ.