ತಾವು ಇಷ್ಟಪಡುವ.. ಆರಾಧಿಸುವ.. ವ್ಯಕ್ತಿ ತಮ್ಮನ್ನು ಮೆಚ್ಚಿದಾಗ.. ಹೊಗಳಿದಾಗ.. ಸಿಗುವ ಆನಂದ.. ಅನುಭವಿಸಿದವರಿಗಷ್ಟೇ ಗೊತ್ತು. ಅಂತಾದ್ದೊಂದು ಅನುಭವದಲ್ಲಿದ್ದಾರೆ ರಕ್ಷಿತ್ ಶೆಟ್ಟಿ. ಏಕೆಂದರೆ ಅವರನ್ನು ಹಾಗೂ ಅವರ ಚಿತ್ರವನ್ನು ಹೊಗಳಿರುವುದು ಸ್ವತಃ ಫೋನ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿರೋದು ಬೇರಾರೋ ಅಲ್ಲ.. ತಲೈವಾ. ತಮಿಳುನಾಡು ಸೂಪರ್ ಸ್ಟಾರ್ ರಜನಿಕಾಂತ್.
ಸಿನಿಮಾ ನೋಡಿರುವ ರಜನಿಕಾಂತ್ ಖುದ್ದು ರಕ್ಷಿತ್ ಶೆಟ್ಟಿಯವರಿಗೆ ಫೋನ್ ಮಾಡಿ ಒಳ್ಳೆ ಸಿನಿಮಾ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ರಾತ್ರಿ ಸಿನಿಮಾ ನೋಡಿದ ರಜನಿಕಾಂತ್, ಬೆಳಕು ಹರಿಯುತ್ತಿದ್ದಂತೆ ರಕ್ಷಿತ್ ಶೆಟ್ಟಿಗೆ ಫೋನ್ ಮಾಡಿದ್ದಾರೆ. ಚಿತ್ರದ ಮೇಕಿಂಗ್, ಕಥೆ, ಕ್ವಾಲಿಟಿ.. ಎಲ್ಲಕ್ಕಿಂತ ಹೆಚ್ಚಾಗಿ ಚಿತ್ರದ ಕ್ಲೈಮಾಕ್ಸ್ ರಜನಿಕಾಂತ್‍ಗೆ ಇಷ್ಟವಾಗಿದೆ. ರಜನಿ ಸರ್ ಅವರಿಂದ ಪ್ರಶಂಸೆ ಕೇಳಿದ್ದು ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದಾರೆ ರಕ್ಷಿತ್ ಶೆಟ್ಟಿ.
777 ಚಾರ್ಲಿ 3ನೇ ವಾರಕ್ಕೆ ಕಾಲಿಟ್ಟಿದೆ. ಥಿಯೇಟರ್ ಮತ್ತು ಸ್ಕ್ರೀನ್‍ಗಳ ಸಂಖ್ಯೆ ಹೆಚ್ಚಾಗಿದೆ. ಈಗಾಗಲೇ ಚಿತ್ರವನ್ನು ಸಿಎಂ ಬೊಮ್ಮಾಯಿ, ರಾಜ್ಯಸಭೆ ಸದಸ್ಯ ಜಗ್ಗೇಶ್, ಸಚಿವರಾದ ಸುಧಾಕರ್, ಅರ್.ಅಶೋಕ್, ನಾಗೇಶ್, ಕೇಂದ್ರ ಬಿಜೆಪಿ ನಾಯಕಿ ಮನೇಕಾ ಗಾಂಧಿ, ಬೋನಿ ಕಪೂರ್, ರಮ್ಯಾ, ಸಾಯಿ ಪಲ್ಲವಿ, ಶ್ರದ್ಧಾ ಶ್ರೀನಾಥ್, ರಾಣಾ ದಗ್ಗುಬಾಟಿ, ನೆನಪಿರಲಿ ಪ್ರೇಮ್, ಶಿವಣ್ಣ, ಜಾನ್ ಅಬ್ರಹಾಂ.. ಹೀಗೆ ಸ್ಟಾರ್ ನಟ ನಟಿಯರೆಲ್ಲ ಮೆಚ್ಚಿದ್ದಾರೆ.