ದೂದ್ ಪೇಡ ದಿಗಂತ್ ಸಮ್ಮರ್ ಸಾಲ್ಟ್ ಹೊಡೆಯಲು ಹೋಗಿ ಕುತ್ತಿಗೆಯ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಗೋವಾ ಬೀಚ್‍ನಲ್ಲಿ ಭಾನುವಾರ ನಡೆದ ಅಪಘಾತವಿದು. ಗೋವಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ದಿಗಂತ್ ಅವರನ್ನು ಏರ್ ಲಿಫ್ಟ್ ಮಾಡಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆಪರೇಷನ್ ಕೂಡಾ ಆಗಿದೆ.
ಪತ್ನಿ ಐಂದ್ರಿತಾ ರೇ ಜೊತೆ ಗೋವಾಗೆ ಹೋಗಿದ್ದ ದಿಗಂತ್, ಈ ಬಾರಿಯೂ ತಮ್ಮ ಸಾಹಸದ ಹುಚ್ಚಿನಿಂದಲೇ ಅಪಘಾತ ಮಾಡಿಕೊಂಡಿದ್ದಾರೆ. ಈ ಹಿಂದೆ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಸದ್ಯಕ್ಕೆ ದಿಗಂತ್ ಅವರಿಗೆ ಆಪರೇಷನ್ ಆಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಸತತ 3 ಗಂಟೆಗಳ ಆಪರೇಷನ್ ನಂತರ ದಿಗಂತ್ ಅವರನ್ನು ಅಬ್ಸರ್ವೇಷನ್‍ನಲ್ಲಿ ಇಡಲಾಗಿದೆ.
ದಿಗಂತ್ ಗಟ್ಟಿಮುಟ್ಟಾಗಿರೋ ಯುವಕ. ದೇಹವನ್ನು ಚೆನ್ನಾಗಿಟ್ಟುಕೊಂಡಿದ್ದಾರೆ. ಹೀಗಾಗಿ ಆತಂಕ ಪಡುವ ಅಗತ್ಯವೇನೂ ಇಲ್ಲ ಎಂದು ಮಾಹಿತಿ ನೀಡಿದ್ದಾರೆ ನಿರ್ದೇಶಕ ಯೋಗರಾಜ್ ಭಟ್. ಕೆಲವೇ ದಿನಗಳಲ್ಲಿ ದಿಗಂತ್ ಸಂಪೂರ್ಣ ಗುಣಮುಖರಾಗಿ ಮನೆಗೆ ಬರಲಿದ್ದಾರೆ. ಅವರ ಆರೋಗ್ಯಕ್ಕಾಗಲೀ, ಬೆನ್ನು ಮೂಳೆಗಾಗಲೀ.. ಅಥವಾ ಅವರ ಮುಂದಿನ ನೃತ್ಯ ಮತ್ತಿತರೆ ಕೆಲಸಗಳಿಗಾಗಲೀ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ ಯೋಗರಾಜ್ ಭಟ್.
ದಿಗಂತ್ ಅವರ ತಂದೆ ಹಾಗೂ ತಾಯಿ ಕೂಡಾ ದಿಗಂತ್ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಸ್ಪೈನಲ್ ಕಾರ್ಡ್‍ಗೆ ಯಾವುದೇ ಏಟಾಗಿಲ್ಲ. ಗುಣಮುಖನಾಗುತ್ತಾನೆ ಎಂದಿದ್ದಾರೆ ದಿಗಂತ್ ಅವರ ತಂದೆ