ಹಲವರ ಕಥೆ ಸಿನಿಮಾ ಆಗಿದೆ. ಆದರೆ ಆರ್ಕೆಸ್ಟ್ರಾ ಕಟ್ಟುವ, ಕನಸು ಕಾಣುವ ಹುಡುಗನ ಕಥೆ ಸಿನಿಮಾ ಆಗುತ್ತಿರೋದು ಇದೇ ಮೊದಲು. ಅಂತಾದ್ದೊಂದು ಸಾಹಸಕ್ಕೆ ಕೈ ಹಾಕಿ ಗೆಲ್ಲುವ ಹುಕಿ ತೋರಿಸಿದ್ದಾರೆ ಡಾಲಿ ಧನಂಜಯ್ ಮತ್ತು ಕಾರ್ತಿಕ್ ಗೌಡ. ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಷ್ಟೇ ಅಲ್ಲ, ಈ ಚಿತ್ರವನ್ನು ನೀವೂ ನೋಡಿ ಎಂದು ಖುದ್ದು ಪ್ರಧಾನಿ ಮೋದಿಗೇ ವೆಲ್ ಕಂ ಹೇಳಿದ್ದಾರೆ ದಿವ್ಯಸ್ಪಂದನ ಅಲಿಯಾಸ್ ರಮ್ಯಾ.
ನರೇಂದ್ರ ಮೋದಿ ಕರ್ನಾಟಕ ಪ್ರವಾಸದಲ್ಲಿದ್ದಾರೆ. ಮೈಸೂರಿಗೆ ಅವರು ಭೇಟಿ ನೀಡಿದ್ದು, ಮೈಸೂರಿನಲ್ಲಿ ಏನೇನು ಮಾಡಬಹುದು ಎಂದು ರಮ್ಯಾ ಅವರಿಗೆ ಸಲಹೆ ನೀಡಿದ್ದಾರೆ. ಆ ಸಲಹೆಗಳಲ್ಲಿ 'ಆರ್ಕೆಸ್ಟ್ರಾ ಮೈಸೂರು' ಟ್ರೈಲರ್ ನೋಡುವುದು ಕೂಡ ಒಂದು. 'ಮೈಸೂರಿನಲ್ಲಿರುವ ಆರ್ಕೆಸ್ಟ್ರಾ ಸಂಸ್ಕೃತಿ ತಿಳಿಯಬೇಕು ಎಂದರೆ ನೀವು ಮೈಸೂರಿನ ಪ್ರತಿಭಾವಂತರು ಮಾಡಿರುವ ಆರ್ಕೆಸ್ಟ್ರಾ ಮೈಸೂರು' ಸಿನಿಮಾ ಟ್ರೈಲರ್ ಕೂಡ ನೋಡಬಹುದು' ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
ಇಂದು ಒಂಥರಾ ಮೈಸೂರಿನವರದ್ದೇ ಸಿನಿಮಾ. ಹೀರೋ ಪೂರ್ಣಚಂದ್ರ ತೇಜಸ್ವಿ ಮೈಸೂರು. ನಿರ್ದೇಶನ ಸುನಿಲ್ ಮೈಸೂರು. ರಾಜಲಕ್ಷ್ಮಿ, ದಿಲೀಪ್ ರಾಜ್, ಮಹೇಶ್ ಕುಮಾರ್, ರವಿ ಹುಣಸೂರು.. ಹೀಗೆ ಎಲ್ಲರೂ ಬಹುತೇಕ ಮೈಸೂರಿನವರೇ. ಚಿತ್ರದ ಎಲ್ಲ ಹಾಡುಗಳನ್ನೂ ಬರೆದಿರುವುದು ಡಾಲಿ ಧನಂಜಯ್. ಸಂಗೀತ ರಘು ದೀಕ್ಷಿತರದ್ದು. ಕಥೆಗಾರರಲ್ಲಿ ನಿರ್ದೇಶಕ ಸುನಿಲ್ ಮೈಸೂರು ಜೊತೆಗೆ ಇರೋದು ಮತ್ತೊಂದು ಮೈಸೂರು ಪ್ರತಿಭೆ ನವೀನ್ ಸಜ್ಜು. ಒಟ್ಟಿನಲ್ಲಿ ಇದು ಮೈಸೂರಿನವರಿಂದ.. ಕನ್ನಡಿಗರಿಗಾಗಿ ಬರುತ್ತಿರೋ ಸಿನಿಮಾ.