ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶಿವಣ್ಣ ನಟಿಸುತ್ತಿರುವ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಇದು ರಜನಿಯ 169ನೇ ಸಿನಿಮಾ. ಜೈಲರ್ ಇದು ಟೈಟಲ್. ಸನ್ ಪಿಕ್ಚರ್ಸ್ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದು, ರಕ್ತ ಸಿಕ್ತ ಕತ್ತಿಯನ್ನು ಮಾತ್ರ ತೋರಿಸಲಾಗಿದೆ. ಜೈಲರ್ ಶೀರ್ಷಿಕೆ ನೋಡಿದವರಿಗೆ ಚಿತ್ರದ ಕಥೆ ಏನಿರಬಹುದು ಎಂಬ ಕುತೂಹಲ ಹುಟ್ಟಿದೆ.
ರಜನಿ ಇದರಲ್ಲಿ ಮಾಸ್ ಅವತಾರದಲ್ಲಿರುತ್ತಾರೆ ಎನ್ನುವುದು ಒಂದು ನಿರೀಕ್ಷೆ. ಕೊಲಮಾವು ಕೋಕಿಲ, ಡಾಕ್ಟರ್, ಬೀಸ್ಟ್ ಚಿತ್ರಗಳನ್ನು ನಿರ್ದೇಶಿಸಿದ್ದ ನೆಲ್ಸನ್ ನಿರ್ದೇಶನದ ಚಿತ್ರವಿದು.
ಬೀಸ್ಟ್ ಸಿನಿಮಾ ದೊಡ್ಡ ಹಿಟ್ ಆಗಿರಲಿಲ್ಲ. ಆದರೂ ಸನ್ ಪಿಕ್ಚರ್ಸ್ ನೆಲ್ಸನ್ ಅವರಿಗೇ ಚಿತ್ರದ ನಿರ್ದೇಶನದ ಅವಕಾಶ ನೀಡಿರುವುದು ವಿಶೇಷ.
ತಲೈವಾ ಜೊತೆಗಿನ ಸಿನಿಮಾ ಕುರಿತಂತೆ ನೆಲ್ಸನ್ ಶಿವಣ್ಣ ಜೊತೆ ಮಾತುಕತೆ ನಡೆಸಿದ್ದರು. ಚಿತ್ರಕ್ಕೆ ಯೆಸ್ ಹೇಳಿದ್ದೇನೆ ಎಂದು ಶಿವಣ್ಣ ಕೂಡಾ ಹೇಳಿದ್ದರು. ಆದರೆ ಶಿವಣ್ಣ ಪಾತ್ರವೇನು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್ ಆಗಿಯೇ ಇದೆ. ಈ ಚಿತ್ರದ ಮೂಲಕ ಶಿವಣ್ಣ ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.
ರಜನಿಕಾಂತ್ ಅವರ ಜೊತೆಗೆ ನಟಿಸುವ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ಅವರು ನನ್ನನ್ನು ಚಿಕ್ಕ ಹುಡುಗನಾಗಿದ್ದಾಗಿನಿಂದ ನೋಡಿದ್ದಾರೆ. ಅವರೊಂದಿಗೆ ನನ್ನ ಒಡನಾಟ ಹಲವು ವರ್ಷಗಳಷ್ಟು ಹಳೆಯದು. ನಟಿಸುವುದಕ್ಕೆ ಕಾಯುತ್ತಿದ್ದೇನೆ ಎಂದಿದ್ದರು ಶಿವಣ್ಣ.
ಆಗಸ್ಟ್‌ನಲ್ಲಿ ಚಿತ್ರೀಕರಣ ಶುರುವಾಗುತ್ತಿದ್ದು, ರಜನಿಕಾಂತ್ ಮತ್ತು ಶಿವ ರಾಜ್ ಕುಮಾರ್ ದೃಶ್ಯಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆಯುವ ಸಾಧ್ಯತೆ ಇದೆ.ಮೈಸೂರು ರಜನಿಕಾಂತ್ ಅವರಿಗೆ ಲಕ್ಕಿ ಸ್ಪಾಟ್.