777 ಚಾರ್ಲಿ. ಸಿನಿಮಾ ನೋಡಿದವರೆಲ್ಲ ಕಣ್ಣೀರಿಡುತ್ತಿದ್ದಾರೆ. ಬಿಕ್ಕಳಿಸುತ್ತಲೇ ಥಿಯೇಟರಿಂದ ಹೊರ ಬರುತ್ತಿದ್ದಾರೆ. ಪ್ರೇಕ್ಷಕರನ್ನು ಇಷ್ಟೊಂದು ಕಣ್ಣೀರು ಹಾಕಿಸಿದ ಸಿನಿಮಾ ಇತ್ತೀಚೆಗೆ ಬಂದಿರಲಿಲ್ಲ. ಪ್ರೇಕ್ಷಕರು ಭಾವುಕರಾದಷ್ಟೂ ಸಿನಿಮಾ ನಿರ್ಮಾಪಕರಿಗೆ ಲಾಭ. ಅದು ಬೇರೆ ಪ್ರಶ್ನೆ. ಆದರೆ ರಕ್ಷಿತ್ ಶೆಟ್ಟಿಯ ಈ ಸಿನಿಮಾ ಒಂದೊಳ್ಳೆ ಕಥೆಯ ಮೂಲಕ ಬೇರೆಯದೇ ಆದ ಒಂದು ಸಂದೇಶವನ್ನು ಅದ್ಭುತವಾಗಿ ಪ್ರೇಕ್ಷಕರಿಗೆ ತಲುಪಿಸಿದೆ.
ಇತ್ತೀಚೆಗೆ ಈ ಚಿತ್ರದ ಟ್ರೇಲರ್‍ನ್ನು ಬಾಲಿವುಡ್ ಸ್ಟಾರ್ ನಟ ಜಾನ್ ಅಬ್ರಹಾಂ ನೋಡಿದ್ದಾರೆ. ಅಂದಹಾಗೆ ಜಾನ್ ನೋಡಿರೋದು ಸಿನಿಮಾ ಟ್ರೇಲರ್ ಮಾತ್ರ. ಟ್ರೇಲರ್ ನೋಡಿಯೇ ಕಣ್ಣೀರಿಟ್ಟಿರುವ ಜಾನ್ ಅಬ್ರಹಾಂ ನಿರ್ದೇಶಕ ಕಿರಣ್ ರಾಜ್ ಅವರಿಗೆ ಫೋನ್ ಮಾಡಿದ್ದಾರೆ. ಜಾನ್ ಕೂಡಾ ಡಾಗ್ ಪ್ರೇಮಿಯಾಗಿದ್ದು, ಸಿನಿಮಾ ನೋಡೋದಾಗಿ ಹೇಳಿದ್ದಾರಂತೆ. ಶೀಘ್ರದಲ್ಲೇ 777 ಚಾರ್ಲಿ ತಂಡವನ್ನು ಭೇಟಿ ಮಾಡೋದಾಗಿ ಹೇಳಿದ್ದಾರೆ ಅನ್ನೋ ಸುದ್ದಿ ಕೊಟ್ಟಿರೋದು ಕಿರಣ್ ರಾಜ್.
ಇತ್ತೀಚೆಗೆ ಸಿಎಂ ಬೊಮ್ಮಾಯಿ ಕಣ್ಣೀರಿಟ್ಟಿದ್ದರು. ರಮ್ಯಾ ಭಾವುಕರಾಗಿದ್ದರು. ಬೋನಿ ಕಪೂರ್ ಮೆಚ್ಚಿಕೊಂಡಿದ್ದರು. ಮನೇಕಾ ಗಾಂಧಿ ಅದ್ಬುತ ಎಂದಿದ್ದರು. ರಿಕ್ಕಿ ಕೇಜ್ ಮನಸಾರೆ ಹೊಗಳಿದ್ದರು. ಇನ್ನು ಚಿತ್ರ ನೋಡಿ ಬಂದ ಪ್ರತಿಯೊಬ್ಬ ಪ್ರೇಕ್ಷಕನೂ/ಳೂ ಚಿತ್ರದ ಬಗ್ಗೆ ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಹೀಗಾಗಿಯೇ 777 ಚಾರ್ಲಿ, 2022ರ ಇನ್ನೊಂದು ಬ್ಲಾಕ್ ಬಸ್ಟರ್ ಲಿಸ್ಟಿಗೆ ಸೇರಿದೆ.