ಮಠ. ಕನ್ನಡ ಚಿತ್ರರಂಗದ ಒಂದು ಕಲ್ಟ್ ಸಿನಿಮಾ ಎನ್ನಬಹುದು. ಜಗ್ಗೇಶ್ ಮ್ಯಾನರಿಸಂಗೆ ಹೇಳಿ ಮಾಡಿಸಿದಂತಿದ್ದ ಸಿನಿಮಾ. ನಕ್ಕು ನಗಿಸುತ್ತಲೇ ಫಿಲಾಸಫಿ ಹೇಳಿದ್ದ ಸಿನಿಮಾಗೆ ಜಗ್ಗೇಶ್ ವೃತ್ತಿ ಜೀವನದಲ್ಲಿ ಬೇರೆಯದ್ದೇ ಸ್ಥಾನಮಾನವಿದೆ. ಆ ಚಿತ್ರದ ನಿರ್ದೇಶಕ ಹೀರೋ ಈಗ ಆಗಿದ್ದಾರೆ. ಚಿತ್ರದ ಟೈಟಲ್ ಮಠ. ಆದರೆ ನಿರ್ದೇಶಕ ಗುರುಪ್ರಸಾದ್ ಅಲ್ಲ, ರವೀಂದ್ರ ವೆಂಶಿ. ಚಿತ್ರದಲ್ಲಿ ಜಗ್ಗೇಶ್ ಒಬ್ಬರು ಮಾತ್ರ ಇಲ್ಲ.
ಜಗ್ಗೇಶ್ ಅವರನ್ನು ಹೊರತುಪಡಿಸಿದರೆ ಮಂಡ್ಯ ರಮೇಶ್, ಸಾಧು ಕೋಕಿಲ, ತಬಲಾ ನಾಣಿ, ಬಿರಾದಾರ್ ಸೇರಿದಂತೆ ಎಲ್ಲರೂ ಇದ್ದಾರೆ. ಗುರುಪ್ರಸಾದ್ ಹೀರೋ. ಇವರೆಲ್ಲರ ಜೊತೆಗೆ 82 ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.
ಜಗ್ಗೇಶ್ ಅವರಿಗೆ ಸೂಟ್ ಆಗುವಂತಾ ಪಾತ್ರ ಸಿಗಲಿಲ್ಲ. ಹೀಗಿದ್ದರೂ ಅವರನ್ನು ಕಾಂಟ್ಯಾಕ್ಟ್ ಮಾಡಿದೆವು. ಅವರು ಒಪ್ಪಲಿಲ್ಲ ಎನ್ನುವ ರವೀಂದ್ರ ವೆಂಶಿ ಸುಮಾರು 3 ವರ್ಷಗಳ ಕಾಲ ಚಿತ್ರದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಈಗ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಸುಮಾರು 25ರಿಂದ 30 ಮಠಾಧೀಶರು ಚಿತ್ರದಲ್ಲಿ ಬಂದು ಹೋಗುತ್ತಾರೆ. ಒಳ್ಳೆಯ ಮತ್ತು ಕೆಟ್ಟ ಎರಡೂ ಬಗೆಯ ಮಠಾಧೀಶರನ್ನು ಚಿತ್ರದಲ್ಲಿ ತೋರಿಸಿದ್ದೇವೆ ಎನ್ನುತ್ತಾರೆ ರವೀಂದ್ರ ವೆಂಶಿ.