ಕಮಲ್ ಹಾಸನ್ ದೇಶದ ಪ್ರತಿಭಾನ್ವಿತ ನಟ. ಹಲವು ಭಾಷೆಗಳಲ್ಲಿ ನಟಿಸಿರೋ ಕಲಾವಿದ. ಕಮಲ್`ಗೆ ಒಂದಲ್ಲ..ಎರಡಲ್ಲ.. 8 ಭಾಷೆಗಳ ಮೇಲೆ ಒಳ್ಳೆಯ ಹಿಡಿತವಿದೆ. ತಮಿಳು ಮಾತೃಭಾಷೆ. ಕನ್ನಡ, ತೆಲುಗು, ಹಿಂದಿ, ಮಲಯಾಳಂ, ಬೆಂಗಾಲಿ, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳು ಗೊತ್ತು. ಹೀಗಿದ್ದರೂ, ಇತ್ತೀಚೆಗೆ ಬೆಂಗಳೂರಿಗೆ ತಮ್ಮದೇ ಚಿತ್ರದ ಪ್ರಚಾರಕ್ಕೆ ಬಂದಿದ್ದ ಕಮಲ್, ಅಪ್ಪಿತಪ್ಪಿಯೂ ಕನ್ನಡ ಮಾತನಾಡಿರಲಿಲ್ಲ.
ತಮಿಳಿನಲ್ಲೇ ಮಾತನಾಡಿ ಕರ್ನಾಟಕದಲ್ಲಿ ಸಿನಿಮಾ ಪ್ರಚಾರ ಮಾಡಿ ಹೋಗಿದ್ದರು. ಅವರ ವಿಕ್ರಂ ಸಿನಿಮಾ ಕನ್ನಡದಲ್ಲಿ ಡಬ್ ಕೂಡಾ ಆಗಿರಲಿಲ್ಲ. ಕನ್ನಡದಲ್ಲಿ ಇಲ್ಲದ ಚಿತ್ರವನ್ನು ನೋಡಬಾರದು ಎಂಬ ಕ್ಯಾಂಪೇನ್ ನಡೆಯಿತಾದರೂ ಯಶಸ್ವಿಯಾಗಲಿಲ್ಲ. ಇದರ ನಡುವೆಯೂ ವಿಕ್ರಂ ಕರ್ನಾಟಕದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ವಿಕ್ರಂ ಚಿತ್ರದ ಕಲೆಕ್ಷನ್, ಕರ್ನಾಟಕದ ಮಟ್ಟಿಗೆ ದಾಖಲೆಯೇ. ವಿಶ್ವದಾದ್ಯಂತ 200 ಕೋಟಿಗೂ ಹೆಚ್ಚು ಗಳಿಸಿ ಮುನ್ನುಗ್ಗುತ್ತಿರೋ ಚಿತ್ರ ಗೆದ್ದ ಮೇಲೆ ಕಮಲ್ ಹಾಸನ್ ಕನ್ನಡಿಗರಿಗೆ ಕನ್ನಡದಲ್ಲೇ ಧನ್ಯವಾದ ಹೇಳಿದ್ದಾರೆ. ಚಿತ್ರ ಗೆದ್ದ ಮೇಲೆ ಕನ್ನಡ ನೆನಪಾಗಿದೆ.