ಒಂದು ಚೆಂದದ ಪ್ರೇಮಕಥೆ ಎನ್ನುವ ಆಸೆ ಹುಟ್ಟಿಸಿಯೇ ಕುತೂಹಲ ಹುಟ್ಟಿಸಿದ್ದಾರೆ ಹೇಮಂತ್ ಎಂ. ರಾವ್. ಒಂದೆಡೆ 777 ಚಾರ್ಲಿ ಚಿತ್ರವನ್ನು ಪ್ರೀತಿಯಿಂದ ಪ್ರಚಾರ ಮಾಡುತ್ತಿರೋ ರಕ್ಷಿತ್ ಶೆಟ್ಟಿ, ಇನ್ನೊಂದೆಡೆ ತಮ್ಮ ಸಪ್ತಸಾಗರದಾಚೆ ಎಲ್ಲೋ ಚಿತ್ರದ ಟೀಸರ್ ಹೊರಬಿಟ್ಟಿದ್ದಾರೆ. ಅಂದಹಾಗೆ ಈ ಟೀಸರ್ ಹೊರಬರೋಕೆ ಕಾರಣ ಜೂನ್ 6. ಅದು ರಕ್ಷಿತ್ ಶೆಟ್ಟಿ ಹುಟ್ಟುಹಬ್ಬದ ದಿನ.
ಟೀಸರ್‍ನಲ್ಲಿ ಪ್ರೀತಿಯ ಮನುವಿಗೆ ಮನದಾಳದ ಪ್ರೀತಿಯನ್ನೆಲ್ಲ ಹೇಳಿಕೊಳ್ಳೋ ನಾಯಕಿ.. ಕೇಳಿಸಿಕೊಳ್ಳುವ ನಾಯಕ.. ಇದ್ದಕ್ಕಿದ್ದಂತೆ ರಕ್ತ.. ಏನೋ ತಲ್ಲಣ.. ಎಲ್ಲವನ್ನೂ 1.26 ನಿಮಿಷದ ಟೀಸರ್‍ನಲ್ಲೇ ತೋರಿಸಿ ಬೆರಗು ಹುಟ್ಟಿಸುತ್ತಾರೆ ಹೇಮಂತ್.
ರಕ್ಷಿತ್ ಶೆಟ್ಟಿ ಜೊತೆಗೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ ಕೃಷ್ಣ ದೇಶಪಾಂಡೆ.. ಹೀಗೆ ಬೃಹತ್ ತಾರಾಗಣವೇ ಚಿತ್ರಕ್ಕಿದೆ.
ಅಂದಹಾಗೆ ರಕ್ಷಿತ್ ಶೆಟ್ಟಿಗೆ ಗಿಫ್ಟ್ ಕೊಡುವ ಆಸೆಯಿದ್ದವರೆಲ್ಲ ಜೂನ್ 10ಕ್ಕೆ ಕೊಡಬಹುದು. ಆವತ್ತೇ ಅಲ್ವಾ 777 ಚಾರ್ಲಿ ರಿಲೀಸ್..?