ಹೊಸಪೇಟೆಯಲ್ಲಿ ಪುನೀತ್ ರಾಜಕುಮಾರ್ ಅವರ 7.4 ಅಡಿ ಎತ್ತರದ ಕಂಚಿನ ಪುತ್ಥಳಿ ಅನಾವರಣವಾಗಿದೆ. ಆ ಪುತ್ಥಳಿ ಅನಾವರಣ ಮಾಡಿದವರು ಅಣ್ಣ ರಾಘವೇಂದ್ರ ರಾಜಕುಮಾರ್. ಅಪ್ಪು ಪುತ್ಥಳಿಯ ಪಾದಕ್ಕೆ ಮುತ್ತಿಟ್ಟ ರಾಘಣ್ಣ, ಪುತ್ಥಳಿ ಅನಾವರಣಗೊಳಿಸಿದರು. ರಾಘಣ್ಣ ಸ್ಥಿತಪ್ರಜ್ಞರಾಗಿದ್ದರೆ, ಪತ್ನಿ ಮಂಗಳಾ ಕಣ್ಣೀರು ಹಾಕುತ್ತಿದ್ದರು.
ಅಪ್ಪ ಹೋದಾಗ, ಅಮ್ಮ ಹೋದಾಗ ಏನೂ ಅನಿಸಿರಲಿಲ್ಲ. ಅಪ್ಪು ಹೋದಾಗ ಅನಾಥನಾಗಿಬಿಟ್ಟೆ ಎನಿಸಿತು ಎಂದರು ರಾಘಣ್ಣ. ಆ ಅಪ್ಪು ನಮಗೊಂದಿಷ್ಟು ಜವಾಬ್ದಾರಿ ಹೊರಿಸಿ ಹೋಗಿದ್ದಾನೆ. ಅದನ್ನು ನಿಭಾಯಿಸೋಣ.. ಎಂದು ಕರೆಕೊಟ್ಟರು.
ನಿರ್ದೇಶಕ ಸಂತೋಷ್ ಆನಂದರಾಮ್, ನಟ ಅಜೇಯ್ ರಾವ್, ಸಚಿವ ಆನಂದ ಸಿಂಗ್, ಪ್ರವೀಣ್ ಸೂರ್ಯ, ಸಂಗೀತ ನಿರ್ದೇಶಕ ಋಷಿ ಹಾಗೂ ಸಾವಿರಾರು ಪುನೀತ್ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ನಮ್ಮೂರಲ್ಲಿ ಅಪ್ಪು ಪುತ್ಥಳಿ ಅನಾವರಣವಾಗ್ತಿದೆ ಎನ್ನುವುದೇ ನಮಗೆ ಹೆಮ್ಮೆ ಎಂದವರು ಅಜೇಯ್ ರಾವ್. ಇದು ಅಪ್ಪು ಅಡ್ಡಾ ಎಂದು ಘೋಷಿಸಿದ್ದು ಸಂತೋಷ್ ಆನಂದರಾಮ್.
ಅಭಿಮಾನಿಗಳ ಸಾಗರವೇ ಹರಿದು ಬಂದಿತ್ತು. ಕೆಲಕಾಲ ನೂಕುನುಗ್ಗಲು ಉಂಟಾಗಿ ಪರಿಸ್ಥಿತಿ ನಿಭಾಯಿಸಲು ಪೊಲೀಸರು ಪರದಾಡಿದರು.