ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದಾಗ.. ಶಾರೂಕ್ ಖಾನ್ ಧೈರ್ಯ ಮಾಡಿದ್ದರು. ಕೆಜಿಎಫ್‍ಗೆ ಫೈಟ್ ಕೊಡೋಕೆ ಬಂದಿದ್ದ ಹೀರೋ ಸೋತು ಸುಣ್ಣವಾಗಿತ್ತು.
ಕೆಜಿಎಫ್ 2 ರಿಲೀಸ್ ಆದಾಗ ಮುನ್ನೆಚ್ಚರಿಕೆಯಿಂದಾಗಿ ಅಮೀರ್ ಖಾನ್ ಹಿಂದೆ ಸರಿದರು. ಬರುತ್ತೇನೆ ಎಂದ ಶಾಹೀದ್ ಕಪೂರ್ ಒಂದು ವಾರ ಲೇಟಾಗಿ ಜೆರ್ಸಿ ತೊಟ್ಟರೂ ಹೊಡೆತ ಭರ್ಜರಿಯಾಗಿಯೇ ಬಿತ್ತು. ತಮಿಳಿನ ವಿಜಯ್ ಅವರ ಬೀಸ್ಟ್ ಕೂಡಾ ನಿರೀಕ್ಷಿಸಿದಷ್ಟು ಪೈಪೋಟಿ ಕೊಡಲಿಲ್ಲ. ಇದೆಲ್ಲದರಿಂದ ಬಾಲಿವುಡ್ ಸ್ಟಾರ್ ನಟರು ಎಚ್ಚೆತ್ತಿದ್ದಾರೆ.
ಜುಲೈ 28ಕ್ಕೆ ವಿಕ್ರಾಂತ್ ರೋಣ ರಿಲೀಸ್ ಆಗುತ್ತಿದೆ. ಅದಾದ ಒಂದು ದಿನ ಬಿಟ್ಟು, ಜುಲೈ 29ಕ್ಕೆ ತೆರೆಗೆ ಬರೋಕೆ ಅಜಯ್ ದೇವಗನ್ ಅಭಿನಯದ ಥ್ಯಾಂಕ್ ಗಾಡ್ ರೆಡಿಯಾಗಿತ್ತು. ಈಗ ಥ್ಯಾಂಕ್ ಗಾಡ್ ಚಿತ್ರವೇ ಹೆಜ್ಜೆ ಹಿಂದಿಟ್ಟಿದೆ. ಇತ್ತೀಚೆಗೆ ಭಾಷೆ ವಿಚಾರಕ್ಕೆ ಸುದೀಪ್ ಮತ್ತು ಅಜಯ್ ನಡುವೆ ಎದ್ದ ವಿವಾದವನ್ನೊಮ್ಮೆ ನೆನಪಿಸಿಕೊಳ್ಳಿ... ಮಿಕ್ಕಿದ್ದೇಕೆ..?
ಇದರ ನಡುವೆ ಸುದೀಪ್ ಅವರ ವಿಕ್ರಾಂತ್ ರೋಣ ದಿನಕ್ಕೊಮ್ಮೆ ಗಡಂಗ್ ರಕ್ಕಮ್ಮಾ ಎನ್ನುತ್ತಾ ಕ್ರೇಜು ಹೆಚ್ಚಿಸುತ್ತಿದೆ. ಎಲ್ಲ ಭಾಷೆಗಳಲ್ಲೂ ವಿಭಿನ್ನವಾಗಿ ಪ್ರಚಾರ ಮಾಡುತ್ತಿದೆ. ಚಿತ್ರದ ಮೇಕಿಂಗ್ ಭರವಸೆ ಹುಟ್ಟಿಸಿವೆ. ಅನೂಪ್ ಭಂಡಾರಿ ಅವರು ಚಿತ್ರವನ್ನು 3ಡಿಯಲ್ಲೂ ತೆರೆಗೆ ತರುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣದ ಚಿತ್ರ ಇಂಗ್ಲಿಷಿನಲ್ಲೂ ರಿಲೀಸ್ ಆಗುತ್ತಿರೋದು ವಿಶೇಷ.