ವೀಲ್ ಚೇರ್ ರೋಮಿಯೋದಲ್ಲಿ ಅಂಧ ವೇಶ್ಯೆ ಮತ್ತು ಅಕೆಯನ್ನು ಪ್ರೀತಿಸುವ ಮದುವೆಯಾಗಲು ಬಯಸುವ ನಾಯಕನ ಪ್ರೇಮಕಥೆ ಇದೆ. ಆದರೆ, ಅಷ್ಟೇ ಅದ್ಭುತವಾದ ತಂದೆ ಮಗನ ಪ್ರೀತಿಯ ಕಥೆಯೂ ಇದೆ. ಇಲ್ಲಿ ತಂದೆಯ ಪಾತ್ರದಲ್ಲಿ ನಟಿಸಿರೋದು ಸುಚೇಂದ್ರ ಪ್ರಸಾದ್ ಅವರಾದರೆ, ವಿಕಲಚೇತನ ಮಗನಾಗಿ ನಟಿಸಿರುವುದು ರಾಮ್ ಚೇತನ್.
ಕಾಲಿಲ್ಲದ ವೀಲ್ ಚೇರ್ ಇಲ್ಲದೆ ಚಲಿಸಲೂ ಆಗದ ಮಗನಲ್ಲಿ ಆತ್ಮವಿಶ್ವಾಸ ತುಂಬುತ್ತಾ ಪ್ರೀತಿಸುವ ಅಪ್ಪ ಸುಚೇಂದ್ರ ಪ್ರಸಾದ್. ಮಗನಿಗೆ ನ್ಯೂನತೆಗಳೇ ಅರಿವಾಗದಂತೆ ಸಾಕುವ ಅಪ್ಪ, ಮಗ ವೇಶ್ಯೆಯ ಮನೆಗೆ ಹೋಗಬೇಕು ಎಂದಾಗ ಅಲ್ಲಿಗೂ ಕರೆದುಕೊಂಡು ಹೋಗುತ್ತಾನೆ. ಅಂತಾದ್ದೊಂದು ಸನ್ನಿವೇಶವನ್ನು ಎಲ್ಲಿಯೂ ಅಭಾಸವಾಗದಂತೆ.. ಪ್ರೀತಿಯಷ್ಟೇ ಎದ್ದು ಕಾಣುವಂತೆ ಸಹಜವಾಗಿ ನಿರೂಪಿಸಿರುವುದು ನಿರ್ದೇಶಕ ನಟರಾಜ್. ವೇಶ್ಯಾಗೃಹದಲ್ಲಿ ರಾಮ್ ಚೇತನ್ಗೆ ಪರಿಚಯವಾಗುವ ಹುಡುಗಿಯೇ ಮಯೂರಿ. ನಂತರ ಅವರಿಬ್ಬರನ್ನೂ ಒಂದು ಗೂಡಿಸಲು ಅಪ್ಪ ಕೂಡಾ ಹೋರಾಡುತ್ತಾನೆ...
ಇಂತಾದ್ದೊಂದು ವಿಭಿನ್ನ ಕಥೆಯ ಚಿತ್ರ ಈಗ ಥಿಯೇಟರಿನಲ್ಲಿದೆ. ವೆಂಕಟಾಚಲಯ್ಯ ನಿರ್ಮಾಣದ ವೀಲ್ ಚೇರ್ ರೋಮಿಯೋ ಒಂದು ವಿಭಿನ್ನ ವಿಶಿಷ್ಟ ಪ್ರಯೋಗಾತ್ಮಕ ಚಿತ್ರವಾಗಿ ಗಮನ ಸೆಳೆಯುತ್ತಿದೆ. ಆದರೆ.. ಪಕ್ಕಾ ಕಮರ್ಷಿಯಲ್ ಆಗಿದೆ.