ಖುಷಿ, ಶಿಷ್ಯ, ಗುನ್ನಾ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದ ಹುಡುಗಿ ಚೈತ್ರಾ ಹಳ್ಳಿಕೇರಿ. ಚಿತ್ರರಂಗದಲ್ಲಿ ಬೇರೂರುತ್ತಿರುವಾಗಲೇ ಉದ್ಯಮಿ ಬಾಲಾಜಿ ಪೋತರಾಜ್ ಅವರೊಂದಿಗೆ ಮದುವೆಯಾಗಿ ಚಿತ್ರರಂಗ ಬಿಟ್ಟಿದ್ದರು. ನಂತರ ಕಿರುತೆರೆಯ ಧಾರಾವಾಹಿ, ರಿಯಾಲಿಟಿ ಶೋಗಳ ಪ್ರೊಡ್ಯೂಸರ್ ಆಗಿದ್ದರು. ಎರಡು ಮಕ್ಕಳ ತಾಯಿಯೂ ಆಗಿರುವ ಚೈತ್ರಾ ಹಳ್ಳಿಕೇರಿ ಈಗ ಪತಿ ಮತ್ತು ಮಾವನ ವಿರುದ್ಧವೇ ವಂಚನೆಯ ಕೇಸು ದಾಖಲಿಸಿದ್ದಾರೆ.
ಆರೋಪ ಏನು..?
ಚೈತ್ರಾ ಅವರ ಹೆಸರಿನಲ್ಲಿ ಒಂದು ಬ್ಯಾಂಕ್ ಅಕೌಂಟ್ ಇದ್ದು, ಆ ಬ್ಯಾಂಕ್‍ನ ಡೆಬಿಟ್ ಕಾರ್ಡ್ ಚೈತ್ರಾ ಅವರ ಬಳಿಯೇ ಇದೆ. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ಅವರಿಗೇ ಗೊತ್ತಿಲ್ಲದೆ ಅವರದ್ದೇ ಒಡವೆ ಅಡವಿಟ್ಟು, ಚೈತ್ರಾ ಅವರ ಗಂಡ ಮತ್ತು ಮಾವ 14 ಲಕ್ಷ ಲೋನ್ ಪಡೆದಿದ್ದಾರೆ. ಅಕೌಂಟ್‍ನ ಕೆವೈಸಿಯಲ್ಲಿ ಚೈತ್ರಾ ಅವರ ನಂಬರ್ ಚೇಂಜ್ ಮಾಡಿಸಿದ್ದಾರೆ. ಹೀಗಾಗಿ ತಮ್ಮದೇ ಅಕೌಂಟ್‍ನಲ್ಲಿ ಇಷ್ಟೆಲ್ಲ ವ್ಯವಹಾರ ಆಗುತ್ತಿದ್ದರೂ ತಮಗೆ ಗೊತ್ತಾಗಲಿಲ್ಲ. ಇದರ ಹಿಂದೆ ಗಂಡ, ಮಾವ ಅಷ್ಟೇ ಅಲ್ಲ, ಬ್ಯಾಂಕ್‍ನವರ ಕೈವಾಡವೂ ಇದೆ ಎನ್ನುವುದು ಚೈತ್ರಾ ಆರೋಪ.
ವಿವಾದ ಇಷ್ಟೇ ಅಲ್ಲ..!
ಚೈತ್ರಾ ಅವರ ದಾಂಪತ್ಯದಲ್ಲಿ ಈ ಹಿಂದೆಯೂ ಬಿರುಗಾಳಿ ಎದ್ದಿತ್ತು. ಚೈತ್ರಾ ಅವರ ಪತಿ ಬಾಲಾಜಿ ಚೈತ್ರಾ ಅವರ ಮೇಲೆ ಹಲ್ಲೆ ಮಾಡಿದ್ದರು. ಕೇಸೂ ಆಗಿತ್ತು. ಅದಾದ ಮೇಲೆ ಇನ್ಮೇಲೆ ನಿನ್ನ ಮೇಲೆ ಕೈ ಮಾಡೋದಿಲ್ಲ. ಹೊಡೆಯೋದಿಲ್ಲ ಎಂದು ಪ್ರಾಮಿಸ್ ಮಾಡಿದ್ದರು. ನಮಗೆ ಇಬ್ಬರು ಮಕ್ಕಳಿದ್ದಾರೆ. ಹೀಗಾಗಿ ನಾನೂ ಕಾಂಪ್ರಮೈಸ್ ಆದೆ. ಅದಾದ ಮೇಲೂ ನನಗೆ ಹೊಡೆದಿದ್ದಾರೆ. ಸಹಿಸಿಕೊಂಡಿದ್ದೆ. ಕಂಪೆನಿಯ ಡೈರೆಕ್ಟರ್ಸ್ ಸ್ಥಾನದಲ್ಲಿ ನನ್ನನ್ನು ತೆಗೆದು ಕೆಲಸದವರನ್ನು ಸೇರಿಸಿದ್ದಾರೆ. ಇದೆಲ್ಲವೂ ನನಗೆ ಇತ್ತೀಚೆಗೆ ಗೊತ್ತಾಗಿದೆ ಎಂದಿದ್ದಾರೆ ಚೈತ್ರಾ.
ಚೈತ್ರಾ ಅವರದ್ದು ಅರೇಂಜ್ಡ್ ಮ್ಯಾರೇಜ್ ಏನಲ್ಲ. ಚೈತ್ರಾ ಮತ್ತು ಬಾಲಾಜಿ ಇಬ್ಬರೂ ಪರಸ್ಪರ ಪ್ರೀತಿಸಿಯೇ ಮದುವೆಯಾಗಿದ್ದವರು.