ವಿಕ್ರಾಂತ್ ರೋಣ. ರಿಲೀಸ್ ಆಗುತ್ತಿರೋದು ಜುಲೈ 28ಕ್ಕೆ. ಹಬ್ಬ ಶುರುವಾಗುತ್ತಿರೋದು ಇಂದು. ಚಿತ್ರದ ಗಡಂಗ್ ರುಕ್ಕಮ್ಮ.. ಹಾಡಿನ ಕನ್ನಡ ವರ್ಷನ್ ಮೊದಲ ಬಾರಿಗೆ ಇವತ್ತು ರಿಲೀಸ್ ಆಗುತ್ತಿದೆ. ಇದಾದ ನಂತರ ಹಂತ ಹಂತವಾಗಿ ಪ್ರತೀ ದಿನ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನ ಹಾಡುಗಳೂ ರಿಲೀಸ್ ಆಗಲಿವೆ. ದಿನಕ್ಕೊಂದು ಭಾಷೆಯ ಹಾಡು ರಿಲೀಸ್ ಮಾಡಿ ಹಬ್ಬ ಮಾಡುತ್ತಿದೆ ಚಿತ್ರತಂಡ. ಈ ಗಡಂಗ್ ರಕ್ಕಮ್ಮ ಹಾಡಿನಲ್ಲಿ ಕಿಚ್ಚನ ಜೊತೆ ಕುಣಿದು ಕಿಕ್ಕೇರಿಸಿರೋದು ಜಾಕ್ವೆಲಿನ್ ಫರ್ನಾಂಡಿಸ್.
ಸಂಭ್ರಮವನ್ನು ಒಂದೇ ದಿನಕ್ಕೆ ಸೀಮಿತ ಮಾಡಬಾರದು. ದಿನಕ್ಕೊಂದು ಭಾಷೆಯ ಹಾಡನ್ನು ಬಿಡುಗಡೆ ಮಾಡೋದ್ರಿಂದ ಅದು ಹೆಚ್ಚು ಜನಕ್ಕೆ ತಲುಪುತ್ತದೆ ಎನ್ನುವುದು ಈ ಗಡಂಗ್ ರಕ್ಕಮ್ಮ ಹಾಡಿನ ಹಬ್ಬದ ಯೋಜನೆ ಎನ್ನುತ್ತಾರೆ ನಿರ್ಮಾಪಕ ಜಾಕ್ ಮಂಜು.
ಇದರ ಮಧ್ಯೆ ಈ ಚಿತ್ರದ ಬಗ್ಗೆ ಭರ್ಜರಿ ಭವಿಷ್ಯ ನುಡಿದಿರೋದು ರಾಮ್ ಗೋಪಾಲ್ ವರ್ಮಾ. ನೋಡಿದವರು.. ಕೇಳಿದವರು ಒಪ್ಪುತಾರೋ.. ಬಿಡುತ್ತಾರೋ.. ತನಗೆ ಅನ್ನಿಸಿದ್ದನ್ನು ಮುಚ್ಚುಮರೆಯಿಲ್ಲದೆ ನೇರವಾಗಿ ಹೇಳೋ ಆರ್.ಜಿ.ವಿ. ವಿಕ್ರಾಂತ್ ರೋಣ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಈ ಚಿತ್ರ ಕನ್ನಡದಿಂದ ಇನ್ನೊಂದು ಮಾಸ್ಟರ್ ಪೀಸ್ ಆಗಿ ಹೊರಹೊಮ್ಮಲಿದೆ. ಚಿತ್ರದ ಕೆಲವು ದೃಶ್ಯಗಳನ್ನು ನೋಡಿದ್ದೇನೆ. ಚೆನ್ನಾಗಿದೆ. ಜೊತೆಗೆ ಚಿತ್ರದ ಬಿಡುಗಡೆಗೆ ಪಿವಿಆರ್ ಕೈಜೋಡಿಸಿರುವುದು ತುಂಬಾ ಖುಷಿಯಾಯಿತು ಎಂದಿದ್ದಾರೆ ಆರ್.ಜಿ.ವಿ.
ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದ ಚಿತ್ರ ಈಗಾಗಲೇ ಪ್ರಚಾರ ಶುರು ಮಾಡಿದೆ. ಹಿಂದಿಯಲ್ಲಿ ಸಲ್ಮಾನ್, ಝೀ ಸ್ಟುಡಿಯೋಸ್ ಮತ್ತು ಪಿವಿಆರ್ ಚಿತ್ರದ ಜೊತೆ ಕೈಜೋಡಿಸಿವೆ. ಇಂಟರ್‍ನ್ಯಾಷನಲ್ ರಿಲೀಸ್ ಈಗಾಗಲೇ 10 ಕೋಟಿ ಡೀಲ್ ಮಾಡಿದೆ.