` ಯಾವ ಭಾಷೆ ದೊಡ್ಡದು..? : ಸುದೀಪರಿಂದ ಮೋದಿ.. ಮೋದಿಯಿಂದ ಅಕ್ಷಯ್ ಕುಮಾರ್..ವರೆಗೆ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಯಾವ ಭಾಷೆ ದೊಡ್ಡದು..? : ಸುದೀಪರಿಂದ ಮೋದಿ.. ಮೋದಿಯಿಂದ ಅಕ್ಷಯ್ ಕುಮಾರ್..ವರೆಗೆ..
Kiccha Sudeep, PM Narendra Modi

ಯಾವ ಭಾಷೆ ದೊಡ್ಡದು.. ಯಾವುದೂ ಚಿಕ್ಕದು.. ಯಾವ ಭಾಷೆ ಕಲಿಯೋದು.. ಯಾವುದ್ ಬಿಡೋದು..

ಜಯಭಾರತಿ ಮಡಿಲಲ್ಲಿವೆ ನೂರಾರು ಭಾಷೆಗಳು.. ನೂರಾರಲು ಗುರಿಯಿಲ್ಲದ ನೂರಾರು ಕವಲುಗಳು.. ನೋಟಿನಲ್ಲಿ ಕಾಣುವುದು 14 ರಾಜ್ಯಗಳ ಲಿಪಿಗಳು.. ಕನ್ನಡಕ್ಕೆ ಅಲ್ಲಿಹುದು 4ನೆಯ ದೊಡ್ಡ ಸ್ಥಾನಮಾನಗಳು..

ಹೀಗೆ ಬರೋದು ಸಾಮ್ರಾಟ್ ಚಿತ್ರದ ಹಾಡಿನ ಸಾಲು. ಪುಷ್ಪ.. ಬೆನ್ನಲ್ಲೇ ಆರ್.ಆರ್.ಆರ್. .. ಜೊತೆಯಲ್ಲೇ ಬಂದ ಕೆಜಿಎಫ್ ಚಾಪ್ಟರ್ 2. ಚಿತ್ರಗಳ ಭರ್ಜರಿ ಯಶಸ್ಸು ಯಾವ ಇಂಡಸ್ಟ್ರಿ ದೊಡ್ಡದು.. ಯಾವುದು ಚಿಕ್ಕದು ಎಂಬ ವಿವಾದ ಹುಟ್ಟುಹಾಕಿತ್ತು. ಈ ಹಿಂದೆ ಹಿಂದಿ ಭಾಷಾ ಚಿತ್ರರಂಗದವರು ನಡೆದುಕೊಂಡಿದ್ದ ರೀತಿ ನೆನಪಿದ್ದವರಿಗೆ ಇದು ವಿಚಿತ್ರ ಸಂತೋಷವನ್ನೂ ಕೊಟ್ಟಿತ್ತು. ಜೊತೆಗೆ ಹಿಂದಿ ನ್ಯಾಷನಲ್ ಲಾಂಗ್ವೇಜು ಎಂಬ ಸುಳ್ಳನ್ನು ಸತ್ಯದ ಮೇಲೆ ಹೊಡೆದಂತೆ ಹೇಳುತ್ತಿದ್ದವರಿಗೂ ಇದು ಚುರುಕು ಮುಟ್ಟಿಸಿತ್ತು. ನಾನು ದಕ್ಷಿಣದ ಯಾವುದೇ ಭಾಷೆಯ ಚಿತ್ರದಲ್ಲಿ ನಟಿಸೋದಿಲ್ಲ ಎಂಬ ಜಾನ್ ಅಬ್ರಹಾಂ ಅಹಂಕಾರದ ಹೇಳಿಕೆಗೂ ಇಂತಹ ಭ್ರಮೆಗಳೇ ಕಾರಣ.

ಹಿಂದಿ ರಾಷ್ಟ್ರಭಾಷೆಯೇನಲ್ಲ ಎಂಬ ಸುದೀಪ್ ಹೇಳಿಕೆ, ಅದಕ್ಕೆ ಅಜಯ್ ದೇವಗನ್ ಕೊಟ್ಟ ತಿರುಗೇಟು.. ಮೆಗಾಸ್ಟಾರ್ ಚಿರಂಜೀವಿ ಹೇಳಿದ ಅವಮಾನದ ಕಥೆ.. ಕಂಗನಾ ರಾವತ್ ವಿಚಿತ್ರ ಸ್ಟೇಟ್‍ಮೆಂಟು.. ವಿವಾದವನ್ನು ದೊಡ್ಡದಾಗಿ ಮಾಡಿತ್ತು. ಹಿಂದಿಯವರಿಗೆ ಸುದೀಪ್ ಅವರಿಗೆ ಸಿಕ್ಕಂತಹ ಬೆಂಬಲ ಸಿಗಲಿಲ್ಲ. ಅಷ್ಟು ಹೊತ್ತಿಗೆ ಅಜಯ್ ದೇವಗನ್ ವಿಷಾದ ವ್ಯಕ್ತಪಡಿಸಿದರಾದರೂ.. ಬಿಜೆಪಿಯ ಕೆಲವು ರಾಜಕೀಯ ನಾಯಕರು, ಅರ್ಜುನ್ ರಾಂಪಾಲ್ ರಂತಹ ನಟರು ವಿವಾದವನ್ನು ಜೀವಂತವಾಗಿಟ್ಟರು. ವಿವಾದ ಬೆಳೆಯುತ್ತಿದ್ದಂತೆಲ್ಲ ಮನೋಜ್ ಬಾಜಪೇಯಿ, ಸೋನು ನಿಗಮ್, ಮಾಧವನ್, ಸಿದ್ದಾರ್ಥ.. ಮೊದಲಾದವರು ರಾಷ್ಟ್ರೀಯ ಮಟ್ಟದಲ್ಲಿ ಸುದೀಪ್ ಬೆಂಬಲಕ್ಕೆ ಬಂದರೆ, ಸಂಪೂರ್ಣ ಕನ್ನಡ ಚಿತ್ರರಂಗವೇ ಸುದೀಪ್ ಬೆನ್ನಿಗಿತ್ತು. ಅದಕ್ಕೆ ಒಂದು ಹಂತದ ಬ್ರೇಕ್ ಹಾಕಿರೋದು ಪ್ರಧಾನಿ ನರೇಂದ್ರ ಮೋದಿ.

ಯಾವುದೇ ಭಾಷೆ ಮೇಲಲ್ಲ. ಯಾವುದೇ ಭಾಷೆ ಕೀಳೂ ಅಲ್ಲ. ಎಲ್ಲ ಭಾಷೆಗಳೂ ಪೂಜನೀಯ. ಭಾರತದ ಸಂಸ್ಕøತಿ ಇರುವುದೇ ಈ ಪ್ರಾದೇಶಿಕ ಭಾಷೆಗಳಲ್ಲಿ ಎನ್ನುವ ಮೂಲಕ ನರೇಂದ್ರ ಮೋದಿ ಭಾಷಾ ಭಾವೈಕ್ಯತೆಯ ಸಂದೇಶ ಸಾರಿದ್ದರು. ಸುದೀಪ್ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಹೇಳಿದ್ದರು. ಈಗ ಅಕ್ಷಯ್ ಕುಮಾರ್ ಮಾತನಾಡಿದ್ದಾರೆ.

ಬ್ರಿಟಿಷರು ಭಾರತವನ್ನು ಒಡೆದಿದ್ದೇ ಇಂತಹವುಗಳಿಂದ. ಬ್ರಿಟಿಷರನ್ನು ಓಡಿಸಿದ ನಂತರವೂ ನಾವು ಇನ್ನೂ ಪಾಠ ಕಲಿತಿಲ್ಲ. ಮೊದಲಿಗೆ ಉತ್ತರ ಭಾರತ, ದಕ್ಷಿಣ ಭಾರತ ಎನ್ನುವುದನ್ನು ನಾವು ಮೊದಲು ಬಿಡಬೇಕು. ಚಿತ್ರರಂಗ ಎಂದರೆ ಎಲ್ಲರೂ ಒಂದೇ. ಇಷ್ಟಕ್ಕೂ ಇಲ್ಲಿನ ಚಿತ್ರಗಳು ಸಕ್ಸಸ್ ಆದಾಗ, ನಮಗೆ ಇಷ್ಟವಾದಾಗ ಅವುಗಳನ್ನು ರೀಮೇಕ್ ಮಾಡಿದರೆ ತಪ್ಪೇನಿದೆ. ಚಿತ್ರರಂಗ ಒಂದೇ ಅಲ್ಲವೇ. ಮೊದಲು ದಕ್ಷಿಣ ಭಾರತ ಚಿತ್ರರಂಗ, ಉತ್ತರ ಭಾರತ ಚಿತ್ರರಂಗ ಅನ್ನೋದನ್ನು ಬಿಡೋಣ ಎಂದಿದ್ದಾರೆ ಅಕ್ಷಯ್ ಕುಮಾರ್.

ವಿವಾದ ಇಲ್ಲಿಗೇ ಮುಗಿಯುತ್ತಾ..? ಗೊತ್ತಿಲ್ಲ..