ಕನ್ನಡಿಗರಿಗೆ ಪ್ರಿಯಾಂಕಾ ಎಂಬ ಬೆಂಗಾಳಿ ನಟಿ ಪರಿಚಯವಾಗಿದ್ದು ಕೋಟಿಗೊಬ್ಬ ಚಿತ್ರದಿಂದ. ವಿಷ್ಣುವರ್ಧನ್ ಚಿತ್ರದ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಪ್ರಿಯಾಂಕಾ ಕರ್ನಾಟಕದ ಸೊಸೆಯಾದರು. ಉಪೇಂದ್ರ ಅವರನ್ನು ಮದುವೆಯಾದರು. ಕನ್ನಡ ಕಲಿತರು. ಕನ್ನಡತಿಯೇ ಆಗಿಹೋದರು. ಮದುವೆಯ ನಂತರವೂ ಸಿನಿಮಾ ಮುಂದುವರೆಸಿರೋ ಪ್ರಿಯಾಂಕಾ ಉಪೇಂದ್ರ ಯಶಸ್ವಿಯಾಗಿ 50 ಚಿತ್ರಗಳಲ್ಲಿ ನಟಿಸಿದ ಸಾಧನೆ ಮಾಡಿದ್ದಾರೆ.
ಈಗ ಹೊಸದಾಗಿ ಒಪ್ಪಿಕೊಂಡಿರೋ ಡಿಟೆಕ್ಟಿವ್ ತೀಕ್ಷ್ಣ ಪ್ರಿಯಾಂಕಾ ಅವರ 50ನೇ ಸಿನಿಮಾ. ಈ ಚಿತ್ರದಲ್ಲಿ ಅವರದ್ದು ಪ್ರೈವೇಟ್ ಡಿಟೆಕ್ಟಿವ್ ಪಾತ್ರವಂತೆ.
ಬೆಂಗಾಳಿಯ ಯೊದ್ಧ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸಿದ್ದ ಪ್ರಿಯಾಂಕಾ, ನಂತರ ಹೋತಾಥ್ ಬ್ರಿಷ್ಟಿ ಚಿತ್ರದ ಮೂಲಕ ಹೀರೋಯಿನ್ ಆದರು. ಬೆಂಗಾಳಿ, ಹಿಂದಿಯಲ್ಲಷ್ಟೇ ನಟಸಿತ್ತಿದ್ದ ಪ್ರಿಯಾಂಕಾ.. ತೆಲುಗಿನ ಮೂಲಕ ದಕ್ಷಿಣ ಭಾರತ ಚಿತ್ರರಂಗಕ್ಕೆ ಬಂದರು. ಅಲ್ಲಿ ನಟಿಸಿದ ಮೊದಲ ಸಿನಿಮಾ ಸೂರಿ. ತೆಲುಗಿನಲ್ಲಿ 2ನೇ ಸಿನಿಮಾ ರಾ. ಉಪೇಂದ್ರ ಹೀರೋ. ಹೀಗೆ ಶುರುವಾದ ಪ್ರಿಯಾಂಕಾ ಅವರ ಸಿನಿ ಜರ್ನಿ, 50 ಚಿತ್ರಗಳಲ್ಲಿ ನಟಿಸುವ ಲೆವೆಲ್ಲಿಗೆ ಬಂದಿದೆ. ಒಬ್ಬ ನಾಯಕಿ 50 ಚಿತ್ರಗಳಲ್ಲಿ ನಟಿಸುವುದು ಸರಳ ವಿಷಯವೇನಲ್ಲ.
ಇದರ ನಡುವೆ ಮದುವೆಯಾಯಿತು. ಮಕ್ಕಳಾದವರು. ಮಕ್ಕಳು ದೊಡ್ಡವರಾದರು. ಅವುಗಳೆಲ್ಲದಕ್ಕೂ ಸಮಯ ಹೊಂದಿಸಿಕೊಂಡೇ 50 ಸಿನಿಮಾಗಳಲ್ಲಿ ನಟಿಸಿ ಗೆದ್ದಿರೋದು ಪ್ರಿಯಾಂಕಾ ಅವರ ಸಾಧನೆ.
ಪತಿ ಉಪೇಂದ್ರ ಅವರ ಸಪೋರ್ಟ್ ಕೂಡಾ ಇದಕ್ಕೆ ಪ್ರಮುಖ ಕಾರಣ. ಮಕ್ಕಳು ಚಿಕ್ಕವರಿದ್ದಾಗ ಬೇಡ ಅನ್ನೋ ಕಂಡೀಷನ್ ಹಾಕಿಕೊಂಡಿದ್ದೆವು. ನಂತರ ಮಕ್ಕಳು ದೊಡ್ಡವರಾದರು. ಓಡಾಟ ಕಷ್ಟ ಎನಿಸಿದಾಗ ಕನ್ನಡದಲ್ಲಿಯೇ ಹೆಚ್ಚು ನಟಿಸಲು ನಿರ್ಧರಿಸಿದೆ. ಇದರ ನಡುವೆಯೂ ಮದುವೆಯಾದ ಮೇಲೆ 9 ಬೆಂಗಾಳಿ ಚಿತ್ರಗಳಲ್ಲಿ ನಟಿಸಿದ್ದೇನೆ ಎನ್ನುವ ಪ್ರಿಯಾಂಕಾ ನಟಿಯಷ್ಟೇ ಅಲ್ಲ, ನಿರ್ಮಾಪಕಿಯೂ ಹೌದು.
ಕನ್ನಡದ ವಿಷಯಕ್ಕೆ ಬಂದರೆ ಬೆಂಗಾಳಿಯಾದರೂ ಕನ್ನಡವನ್ನು ಚೆಂದವಾಗಿ ಮಾತನಾಡುತ್ತಾರೆ. ಕನ್ನಡ ಬರುತ್ತದೆ. ಆದರೆ ಓದೋಕೆ, ಬರೆಯೋಕೆ ಬರಲ್ಲ. ಮಕ್ಕಳಿಗೆ ಮಾತ್ರ ಕನ್ನಡ ಕಲಿಸುತ್ತಿದ್ದೇನೆ. ನಾನು ಕನ್ನಡದಲ್ಲಿ ಡಬ್ ಮಾಡುವುದಿಲ್ಲ. ಅಷ್ಟು ಕಾನ್ಫಿಡೆನ್ಸ್ ಇಲ್ಲ. ಬೆಂಗಾಳಿಯಲ್ಲಿ ನಾನೇ ಡಬ್ ಮಾಡುತ್ತೇನೆ ಎನ್ನುವ ಪ್ರಿಯಾಂಕಾ ಉಪೇಂದ್ರ ಇನ್ನಷ್ಟು ಮತ್ತಷ್ಟು ಚಿತ್ರಗಳಲ್ಲಿ ನಟಿಸುವಂತಾಗಲಿ.