ಮಯೂರಿ ಮೊದಲಿನಿಂದಲೂ ಚಾಲೆಂಜಿಂಗ್ ಪಾತ್ರಗಳನ್ನೇ ಇಷ್ಟಪಟ್ಟವರು. ನಟರಾಜ ಸರ್ವಿಸ್ ಚಿತ್ರದ ಲತ್ತೆ ಪಾತ್ರವೇ ಇರಲಿ, ಕೃಷ್ಣಲೀಲಾದ ಲೀಲಾ ಪಾತ್ರವೇ ಇರಲಿ.. ಎಲ್ಲವೂ ಸವಾಲಿನ ಪಾತ್ರಗಳೇ. ಅಂತಹುದೇ ಪಾತ್ರ ವೀಲ್‍ಚೇರ್ ರೋಮಿಯೋ ಚಿತ್ರದ ನಾಯಕಿಯ ಪಾತ್ರ.
ಚಿತ್ರದಲ್ಲಿ ನಾಯಕಿಗೆ ಕಣ್ಣು ಕಾಣಲ್ಲ. ವೃತ್ತಿಯಲ್ಲಿ ವೇಶ್ಯೆ. ಪಾತ್ರದ ಮೊದಲ ಸಾಲು ಕೇಳಿ ಥ್ರಿಲ್ಲಾಗುತ್ತಿದ್ದ ಹಲವು ನಾಯಕಿಯರು, ವೇಶ್ಯೆ ಎಂದ ತಕ್ಷಣ ನೋ ಎನ್ನುತ್ತಿದ್ದರಂತೆ. ಆದರೆ ಪಾತ್ರಕ್ಕೆ ನಿರ್ದೇಶಕರು ನೀಡಿರುವ ಘನತೆ ಪಾತ್ರವನ್ನು ಒಪ್ಪುವಂತೆ ಮಾಡಿತು ಎನ್ನುತ್ತಾರೆ ಮಯೂರಿ. ಚಿತ್ರದಲ್ಲಿ ನಾಯಕಿಗೆ ಎಕ್ಸ್‍ಪೋಸ್ ಇಲ್ಲ. ಬೀಡುಬೀಸು ಸಂಭಾಷಣೆಗಳಲ್ಲಿ ವಿಭಿನ್ನ ವ್ಯಕ್ತಿತ್ವದ ಅನಾವರಣವಾಗುತ್ತಾ ಹೋಗುತ್ತದೆ. ಹೀಗಾಗಿಯೇ ಪಾತ್ರಕ್ಕೆ ಒಪ್ಪಿಕೊಂಡೆ ಎನ್ನುತ್ತಾರೆ ಮಯೂರಿ.
ಚಿತ್ರದ ಹೀರೋ ರಾಮ್ ಚೇತನ್. ವಿಕಲಚೇತನ. ಕಾಲಿಲ್ಲದೆ ವೀಲ್‍ಚೇರ್‍ನಲ್ಲೇ ಓಡಾಡುವ ನಾಯಕ ವೇಶ್ಯಾಗೃಹಕ್ಕೆ ಹೋಗುವ ಆಸೆ ತೋರಿಸುತ್ತಾನೆ. ಕರೆದುಕೊಂಡು ಹೋಗೋದು ಖುದ್ದು ಆತನ ತಂದೆ ಸುಚೇಂದ್ರ ಪ್ರಸಾದ್. ಅಲ್ಲಿ ಅವನಿಗೆ ವೇಶ್ಯೆ ಮಯೂರಿಯ ಮೇಲೆ ಪ್ರೀತಿಯಾಗುತ್ತೆ. ನಂತರ ನಡೆಯೋ ಕಥೆಯೇ ವೀಲ್‍ಚೇರ್ ರೋಮಿಯೋ. ನಿರ್ದೇಶಕ ನಟರಾಜ್ ಚಿತ್ರ ಕಥೆಯನ್ನೂ ಅಷ್ಟೇ ಚೆಂದವಾಗಿ ಹೇಳಿದ್ದಾರೆ. ರಂಗಾಯಣ ರಘು ವಿಭಿನ್ನ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ. ಚಿತ್ರ ಇದೇ ತಿಂಗಳು 27ನೇ ತಾರೀಕು ರಿಲೀಸ್ ಆಗುತ್ತಿದೆ.