ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. 6 ಕೋಟಿ ಜನ ಮಾತನಾಡುವ ದೇಶದ ದೊಡ್ಡ ಭಾಷೆಗಳಲ್ಲೊಂದು ಕನ್ನಡ. ಕರ್ನಾಟಕದಲ್ಲಷ್ಟೇ ಅಲ್ಲ, ಪಕ್ಕದ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲೂ ದೊಡ್ಡ ಸಂಖ್ಯೆಯಲ್ಲಿ
ಕನ್ನಡಿಗರಿದ್ದಾರೆ. ಕರ್ನಾಟಕ ಹೊರತುಪಡಿಸಿ ಪಕ್ಕದ ಕೇರಳದ ವಿಧಾನಸಭೆಯಲ್ಲಷ್ಟೇ ಕನ್ನಡ ಮೊಳಗಿತ್ತು. ಆಗೊಮ್ಮೆ.. ಈಗೊಮ್ಮೆ.. ನಮ್ಮ ದೇಶದ ಸಂಸತ್ತಿನಲ್ಲೂ ಕರ್ನಾಟಕದ ಸಂಸದರು ಕನ್ನಡದಲ್ಲಿ ಮಾತನಾಡುತ್ತಾರೆ. ಆದರೆ.. ಇದೇ ಮೊದಲ ಬಾರಿಗೆ ಭಾರತವನ್ನು ಹೊರತುಪಡಿಸಿ ಇನ್ನೊಂದು ದೇಶದ ಸಂಸತ್ನಲ್ಲಿ ಕನ್ನಡ ಮೊಳಗಿದೆ.
ಕೆನಡಾದಲ್ಲಿ ಸಂಸದರಾಗಿರುವ ಚಂದ್ರ ಆರ್ಯ ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ, ಕನ್ನಡದ ಹಿರಿಮೆಯ ಬಗ್ಗೆ ಪುಟ್ಟ ಉಪನ್ಯಾಸವನ್ನೂ ಕೊಟ್ಟಿದ್ದಾರೆ. ಅಂದಹಾಗೆ ಚಂದ್ರ ಆರ್ಯ ಮೂಲತಃ ತುಮಕೂರಿನ ಶಿರಾ ತಾಲೂಕಿನ ದ್ವಾರಾಳು ಗ್ರಾಮದವರು. 2018ರಲ್ಲಿ ಮೊದಲ ಬಾರಿಗೆ ಕೆನಡಾ ಸಂಸತ್ತಿನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗಿತ್ತು. ಸಂಸತ್ತಿನಲ್ಲಿ ಮಾತನಾಡುವಾಗ ಕುವೆಂಪು ವಿರಚಿತ ಕವಿತೆ, ಡಾ.ರಾಜ್ ಹಾಡಿರುವ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗು ನೀ ಕನ್ನಡವಾಗಿರು.. ಎಂದು ಹೇಳಿ ಹೆಮ್ಮೆಯೊಂದಿಗೆ ತಮ್ಮ ಪುಟ್ಟ ಭಾಷಣ ಮುಗಿಸಿದ್ದಾರೆ ಚಂದ್ರ ಆರ್ಯ.