ಒನ್ ಲೈನ್ ಕಥೆಯೇ ವಿಚಿತ್ರ ಎನಿಸುವ ಸಿನಿಮಾ ಇದು. ಚಿತ್ರದ ನಾಯಕನಿಗೆ ಕಾಲಿಲ್ಲ. ವೀಲ್‍ಚೇರ್`ನಲ್ಲೇ ಓಡಾಡುತ್ತಾನೆ. ನಾಯಕಿಗೆ ಕಣ್ಣಿಲ್ಲ. ಮೈಮಾರಿ ಬದುಕುತ್ತಾಳೆ. ಅವರಿಬ್ಬರ ಮಧ್ಯೆ ಪ್ರೀತಿಯಾದರೆ.. ಇಂತಹದ್ದೊಂದು ವಿಭಿನ್ನ ಕಾನ್ಸೆಪ್ಟ್‍ನ್ನೇ ಸಿನಿಮಾ ಮಾಡಿ ತೆರೆಗೆ ತರುತ್ತಿದ್ದಾರೆ ನಟರಾಜ್. ಹೀರೋ ಪಾತ್ರದಲ್ಲಿ ರಾಮ್ ಚೇತನ್ ನಟಿಸಿದ್ದರೆ, ನಾಯಕಿಯಾಗಿರೋದು ಮಯೂರಿ. ಚಿತ್ರದಲ್ಲಿ ಎಕ್ಸ್‍ಪೋಸ್ ಇಲ್ಲ. ಆದರೆ ಎದೆಗೇ ಚಾಕು ಹಾಕುವಂತ ಡೈಲಾಗುಗಳಿವೆ.
ಲಂಚ ಕೇಳುವ ಪೊಲೀಸ್‍ಗೆ ನಾಯಕಿ ಕೇಳ್ತಾಳೆ. ನೀವು ಕೈಚಾಚಿ ಬದುಕ್ತೀರಾ.. ನಾವು ಮೈಚಾಚಿ ಬದುಕ್ತೀವಿ. ಅಷ್ಟೆ..
ಮೈಮಾರುವವಳನ್ನ ಹೆಂಡ್ತಿ ಅಂತಾ ಒಪ್ಪಿಕೊಳ್ತೀರಲ್ಲ.. ಎನ್ನುವ ನಾಯಕಿಗೆ ನಾಯಕ ಕೇಳ್ತಾನೆ. ದೇಶ ಮಾರುವವರನ್ನ ಮಂತ್ರಿ ಅಂತಾ ಒಪ್ಪಿಕೊಳ್ತೀವಿ, ದೇಹ ಮಾರಿಕೊಂಡೋಳನ್ನ ಹೆಂಡ್ತಿ ಅಂತಾ ಒಪ್ಪಿಕೊಳ್ಳೋಕಾಗಲ್ವಾ..?
ಇಂತಹ ಡೈಲಾಗುಗಳ ಹಿಂದಿರೋದು ಡೈರೆಕ್ಟರ್ ನಟರಾಜ್. ಅವರು ಸಂಭಾಷಣೆಕಾರರಾಗಿದ್ದವರು. ರೋಮಿಯೋ, ಜೂಮ್, ಆರೇಂಜ್ ಚಿತ್ರಗಳಿಗೆ ಡೈಲಾಗ್ ಬರೆದಿದ್ದವರು. ಮಠ ಗುರು ಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಜೊತೆ ಕೆಲಸ ಮಾಡಿದ್ದವರು. 15 ವರ್ಷದ ಅನುಭವದ ಹಿನ್ನೆಲೆಯಿರೋ ನಟರಾಜ್ ಅವರ ವಿಚಿತ್ರ ಲವ್ ಸ್ಟೋರಿಗೆ ಬಂಡವಾಳ ಹೂಡಿರುವುದು ತಿಮ್ಮಪ್ಪ ವೆಂಕಟಾಚಲಯ್ಯ ಮತ್ತು ಭಾರತಿ ವೆಂಕಟೇಶ್.
ಜಾಕ್ ಮಾಮನಾಗಿ ರಂಗಾಯಣ ರಘು, ವೇಶ್ಯೆ ಮನೆಗೆ ಮಗನನ್ನು ಕರೆದುಕೊಂಡು ಹೋಗುವ ತಂದೆಯಾಗಿ ಸುಚೇಂದ್ರ ಪ್ರಸಾದ್, ತಬಲಾ ನಾಣಿ.. ಮೊದಲಾದವರು ನಟಿಸಿರೋ ಚಿತ್ರ ಇದೇ ಮೇ 27ರಂದು ರಿಲೀಸ್ ಆಗುತ್ತಿದೆ.