` ಏನಿದು ಲಿಪೋಸಕ್ಷನ್ ಸರ್ಜರಿ? ಸಾವಿಗೆ ಏನು ಕಾರಣ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಏನಿದು ಲಿಪೋಸಕ್ಷನ್ ಸರ್ಜರಿ? ಸಾವಿಗೆ ಏನು ಕಾರಣ?
Chethana Raj

ನಟಿ ಚೇತನಾ ರಾಜ್ ಅವರಿಗೆ ಸಾಯುವ ವಯಸ್ಸಂತೂ ಖಂಡಿತಾ ಆಗಿರಲಿಲ್ಲ. ಕೇವಲ 21 ವರ್ಷ. ಆದರೆ ಗ್ಲಾಮರ್, ಸ್ಲಿಮ್ ಬ್ಯೂಟಿ ಆಸೆಗೆ ಬಿದ್ದು ಲಿಪೋಸಕ್ಷನ್ ಅನ್ನೋ ಸರ್ಜರಿಗೆ ಒಳಗಾದರು. ಎಡವಟ್ಟಾಗಿ ಜೀವ ಬಿಟ್ಟರು. ಇಷ್ಟಕ್ಕೂ ಏನಿದು ಲಿಪೋಸಕ್ಷನ್ ಸರ್ಜರಿ?

ಸಿಂಪಲ್ಲಾಗಿ ಹೇಳಬೇಕೆಂದರೆ ನಮ್ಮ ದೇಹವನ್ನು ಹೊಸ ರೀತಿಯಲ್ಲಿ ಡಿಸೈನ್ ಮಾಡಿಕೊಳ್ಳೋ ಟೆಕ್ನಾಲಜಿ. ನಮ್ಮ ದೇಹ ಎಷ್ಟಿರಬೇಕು? ಸೊಂಟ ಎಷ್ಟಿರಬೇಕು? ಎದೆಯ ಸುತ್ತಳತೆ ಎಷ್ಟಿರಬೇಕು? ಹೀಗೆ ಅಳತೆ ಇಟ್ಟುಕೊಂಡು ರೀ-ಡಿಸೈನ್ ಮಾಡಿಸಿಕೊಳ್ಳೋ ಟೆಕ್ನಾಲಜಿ.

ಈ ಹಾದಿಯಲ್ಲಿ ಹಲವು ವಿಧಾನಗಳಿವೆ. ದೇಹದ ಕೊಬ್ಬಿನ ಭಾಗವನ್ನು ಕತ್ತರಿಸಿ ಅಥವಾ ಕರಗಿಸಿ ಚರ್ಮವನ್ನು ಟೈಟ್ ಆಗಿ ಎಳೆದು ಕೂರಿಸುವುದು. ಸೈಂಟಿಫಿಕಲಿ ಇದರಲ್ಲೇನೂ ತಪ್ಪಿಲ್ಲ. ದಾಖಲೆಗಳ ಪ್ರಕಾರ ಈ ಲಿಪೊಸಕ್ಷನ್ ಸರ್ಜರಿ ಮಾಡಿಸಿಕೊಂಡ ಪ್ರತಿ ಲಕ್ಷ ಜನರಲ್ಲಿ 20 ಜನರಿಗೆ ಮಾತ್ರವೇ ಅಪಾಯ. ಆದರೆ.. ಆ 20ರಲ್ಲಿ ನಾವಿರುವುದಿಲ್ಲ ಎನ್ನುವುದು ಆಪರೇಷನ್‍ಗೆ ಹೋಗುವವರ ನಂಬಿಕೆ. ಅಷ್ಟೆ.

ಇಲ್ಲಿ ದೇಹದ ಶಕ್ತಿಯೂ ಮುಖ್ಯವಾಗುತ್ತದೆ. ದೇಹ ಊದಿಕೊಂಡಾಗ ಅಥವಾ ದಪ್ಪಗಾದಾಗ.. ಅದಕ್ಕೆ ತಕ್ಕಂತೆ ದೇಹದ ಒಳಗಿರೋ ಕರುಳು, ಹೃದಯ, ಸ್ತನಗಳೂ ಉಬ್ಬಿರುತ್ತವೆ. ಅವು ಆಪರೇಷನ್ ಆದ ನಂತರ ಮತ್ತೆ ಸಹಜ ಪ್ರಕ್ರಿಯೆಗೆ ಹೊಂದಿಕೊಳ್ಳೋಕೆ ಸಮಯ ಬೇಕು. ಆ ಸಮಯ ಕೆಲವೊಮ್ಮೆ ತಿಂಗಳಿನಿಂದ ವರ್ಷದವರೆಗೂ ತೆಗೆದುಕೊಳ್ಳುತ್ತದೆ. ಈ ನಡುವೆ ಆಪರೇಷನ್ ಆದವರು ವೈದ್ಯರು ಹೇಳಿದ್ದನ್ನೆಲ್ಲ ಕಡ್ಡಾಯವಾಗಿ ಪಾಲಿಸಬೇಕು. ಧೂಮಪಾನ, ಮದ್ಯಪಾನ, ನಿಯಮಿತ ಆಹಾರ ಹಾಗೂ ವೈದ್ಯರು ಸೂಚಿಸಿದ ಆಹಾರ ಬಿಟ್ಟು ಎಣ್ಣೆ ಅಂಶವಿರುವ ಆಹಾರಗಳಿಂದ ದೂರ ಇರಬೇಕು. ಸಣ್ಣಗಾಗಿದ್ದೇನೆ ಎಂದು ಮನಸೋ ಇಚ್ಚೆ ವ್ಯಾಯಾಮವನ್ನೂ ಮಾಡುವಂತಿಲ್ಲ. ಬಿಡುವಂತೆಯೂ ಇಲ್ಲ. ಎಲ್ಲವೂ ಲಯಬದ್ಧವಾಗಿರಬೇಕು.

ಇದೆಲ್ಲದರ ಜೊತೆಗೆ ಆಪರೇಷನ್ ಮಾಡಿಸಿಕೊಳ್ಳುವವರಿಗೆ ಬಿಪಿ, ಶುಗರ್ ಸೇರಿದಂತೆ ಯಾವುದೇ ಪ್ರಾಬ್ಲಂ ಇರಬಾರದು. ಶಕ್ತಿಯಿಲ್ಲದ ದೇಹವೇ ಇಂತಹ ಆಪರೇಷನ್‍ಗಳಿಗೆ ಒಳಗಾಗುವವರಿಗೆ ಯಮ. ಶಸ್ತ್ರ  ಚಿಕಿತ್ಸೆ ಮುಗಿದ ನಂತರದ 24 ಗಂಟೆಗಳಂತೂ ನಿರ್ಣಾಯಕ. ಆ ಸಂದರ್ಭದಲ್ಲಿ ತಪ್ಪಾಗಿದ್ದರೆ, ರಕ್ತನಾಳವೇ ಬ್ಲಾಕ್ ಆಗಬಹುದು. ಇನ್‍ಫೆಕ್ಷನ್ ಆಗಬಹುದು. ಕರಗಿಸಿದ ಕೊಬ್ಬು ಹೃದಯನಾಳವನ್ನೇನಾದರೂ ಸೇರಿಕೊಂಡರೆ.. ದೇವರಿಂದಲೂ ಉಳಿಸೋಕೆ ಸಾಧ್ಯವಿಲ್ಲ.

ಇದೆಲ್ಲದರ ಜೊತೆಗೆ ಚಿಕಿತ್ಸೆಯ ಹಂತದ ಪ್ರತಿ ಹಂತವೂ ವೈದ್ಯರಿಗೆ ಗೊತ್ತಿರಬೇಕು. ಮೂಲಗಳ ಪ್ರಕಾರ ಇಂತಹ ಎಕ್ಸ್‍ಪರ್ಟ್ ವೈದ್ಯರದ್ದೇ ಕೊರತೆ ಇದೆ.

ಚೇತನಾ ರಾಜ್ ಅವರ ಸಾವಿಗೂ ಇಂತಹ ವೈದ್ಯರ ನಿರ್ಲಕ್ಷ್ಯವೇ ಕಾರಣ ಎನ್ನಲಾಗಿದೆ. ಆದರೆ.. ಇದೂವರೆಗೆ ವೈದ್ಯರ ಎಡವಟ್ಟುಗಳನ್ನು ಯಾರೊಬ್ಬೂ ಪ್ರೂವ್ ಮಾಡೋಕೆ ಆಗಿಲ್ಲ ಎನ್ನುವುದೂ ವಾಸ್ತವ.