` ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರಮ್ಯಾ : ಏನದು 8 ಕೋಟಿ ಕಥೆ? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ರಮ್ಯಾ : ಏನದು 8 ಕೋಟಿ ಕಥೆ?
Ramya Image

ದಿವ್ಯ ಸ್ಪಂದನಾ ರಮ್ಯಾ ಸಿಡಿದೆದ್ದಿದ್ದಾರೆ. ಸಿನಿಮಾದಲ್ಲೇ ಇರಲಿ, ವೈಯಕ್ತಿಕ ವಿಷಯವೇ ಇರಲಿ, ರಾಜಕೀಯವೇ ಇರಲಿ.. ತಮಗೆ ಅವಮಾನವಾಗುತ್ತಿದೆ ಎನಿಸಿದರೆ ಕ್ಷಣವೂ ತಡಮಾಡದೆ ಸಿಡಿದೇಳುವುದು ರಮ್ಯಾ ಸ್ಟೈಲ್. ಕೆಲವವೊಮ್ಮೆ ಎಡವಟ್ಟಾಗಿರೋದು ಹೌದಾದರೂ, ರಮ್ಯಾ ಇರೋದೇ ಹಾಗೆ. ರಮ್ಯಾ ಹಾಗಿದ್ದಾರೆ ಅನ್ನೋ ಕಾರಣಕ್ಕೇ ಅವರನ್ನು ಹಲವರು ಕೆಣಕುವ ಧೈರ್ಯ ಮಾಡೋದಿಲ್ಲ. ಆದರೆ ಈ ಬಾರಿ ರಮ್ಯಾ ಕೆಣಕಿರೋದು ಒಬ್ಬರನ್ನಲ್ಲ. ರಾಜ್ಯ ಕಾಂಗ್ರೆಸ್‍ನ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಅವರನ್ನ. ಇದರ ಹಿಂದೆ 8 ಕೋಟಿಯ ಕಥೆಯೂ ಇದೆ. ಕಥೆ ಶುರವಾಗಿದ್ದು ಹೀಗೆ..

ಶುರುವಾಗಿದ್ದು ಇಲ್ಲಿಂದ..

ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರೋ ಪಿಎಸ್‍ಐ ನೇಮಕಾತಿ ಹಗರಣದಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಅವರ ಹೆಸರು ಕೇಳಿಬಂದಿದೆ. ಹೆಸರು ಹೇಳಿದ್ದು ಸ್ವತಃ ಡಿಕೆಶಿ. ಅದು ದೊಡ್ಡದಾಗುತ್ತಿರೋವಾಗ ತಮ್ಮದೇ ಪಕ್ಷದ ಪ್ರಭಾವಿ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಅಶ್ವತ್ಥ್ ನಾರಾಯಣ್ ಅವರನ್ನು ಭೇಟಿ ಮಾಡಿದ್ದಾರೆ ಎಂದರು ಡಿಕೆ. ಸಚಿವ ಅಶ್ವತ್ಥ್ ನಾರಾಯಣ್ ಅವರು ನೋ ಎಂದಿದ್ದರೆ ಓಕೆ, ಆದರೆ ಸ್ವತಃ ಅವರದ್ದೇ ಪಕ್ಷದ ನಾಯಕ ಎಂ.ಬಿ.ಪಾಟೀಲ್ ಇಲ್ಲ, ಡಿಕೆ ಹೇಳಿರೋದು ಸತ್ಯ ಅಲ್ಲ ಎಂದುಬಿಟ್ಟರು. ಸಿದ್ದರಾಮಯ್ಯ ಕೂಡಾ ಎಂ.ಬಿ.ಪಾಟೀಲ್ ಮಾತಿಗೇ ಸೈ ಎಂದರು. ಆಗ ಹೊರಬಿತ್ತು ರಮ್ಯಾ ಅವರ ಒಂದು ಸ್ಟೇಟ್‍ಮೆಂಟ್.

ಬೇರೆ ಬೇರೆ ಪಕ್ಷದ ನಾಯಕರು ಪರಸ್ಪರ ಭೇಟಿಯಾಗುವುದು ಸಾಮಾನ್ಯ. ಪಕ್ಷ ಬೇರೆಯಾಗಿದ್ದರೂ ಕುಟುಂಬಗಳ ನಡುವೆ ಸಂಬಂಧಗಳು ಇವೆ. ಡಿ.ಕೆ.ಶಿವಕುಮಾರ್ ಅವರ ಈ ಹೇಳಿಕೆ ಅಚ್ಚರಿ ಹುಟ್ಟಿಸುತ್ತಿದೆ. ಇದನ್ನೆಲ್ಲ ಬಿಟ್ಟು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬಾರದೇ.. ಇಷ್ಟೇ ಸ್ಟೇಟ್‍ಮೆಂಟ್.

ಟೂಲ್‍ಕಿಟ್ ಸೃಷ್ಟಿಯಾಯ್ತು..

ಇಷ್ಟಾದ ಮೇಲೆ ಸುದ್ದಿ ತಣ್ಣಗಾಗಿದ್ದರೆ ಓಕೆ. ಇದರ ನಡುವೆ ರಮ್ಯಾ ಅವರನ್ನು ಟ್ರೋಲ್ ಮಾಡೋಕೆ ಟೂಲ್ ಕಿಟ್ ರೆಡಿಯಾಯ್ತು. ನಮ್ಮ ನಾಯಕರಿಂದಲೇ ಬೆಳೆದವರ ಬಗ್ಗೆ ಈ ರೀತಿ ಮಾಡೋದು ಸರೀನಾ? ಈಗ ನೀವೇ ಅವರಿಗೆ ಪಾಠ ಮಾಡ್ತಿದ್ದೀರಾ..? ಅನ್ನೋ ಅರ್ಥದ ಸಂದೇಶಗಳು ಸಿದ್ಧವಾದವು. ಕಾಂಗ್ರೆಸ್ ಕಚೇರಿಯಲ್ಲಿ ಸಿದ್ಧವಾದ ಅಂತಹ ಮೆಸೇಜುಗಳು ರಮ್ಯಾ ಅವರ ಕೈಗೇ ಸಿಕ್ಕಿತು. ಅಂದಹಾಗೆ ಕಾಂಗ್ರೆಸ್‍ನ ಸೋಷಿಯಲ್ ಮೀಡಿಯಾವನ್ನು ಸ್ಟ್ರಾಂಗ್ ಮಾಡಿದ್ದು ಇದೇ ರಮ್ಯಾ ಎನ್ನುವುದು ಗೊತ್ತಿರಲಿಲ್ಲವೆನೋ.. ಅದನ್ನು ಸ್ವತಃ ರಮ್ಯಾ ಟ್ವೀಟ್ ಮಾಡಿದರು. ನನ್ನನ್ನು ಬೆಳೆಸಿದ್ದು ರಾಹುಲ್ ಗಾಂಧಿಯೇ ಹೊರತು ಇನ್ಯಾರೂ ಅಲ್ಲ ಎಂದರು ರಮ್ಯಾ. ಬೆಂಕಿ ಹೊತ್ತಿಕೊಳ್ತು.

ರಮ್ಯಾ-ಡಿಕೆ ಗಲಾಟೆಯಲ್ಲಿ ನಲಪ್ಪಾಡ್ ಬಂದಾಗ..

ಇದಾದ ಮೇಲೆ ಡಿಕೆಶಿ ರಮ್ಯಾ ಅವರ ಬಗ್ಗೆ ಒಂದಿಷ್ಟು ವ್ಯಂಗ್ಯವಾಗಿಯೇ ರಿಯಾಕ್ಷನ್ ಕೊಟ್ಟರು. ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಕೂಡಾ ರಮ್ಯಾ ಅವರ ಬಗ್ಗೆ ಮಾತನಾಡಿದಾಗ ಜಾಮೀನಿನ ಮೇಲಿರೋ ಕಾಂಗ್ರೆಸ್ ಮುಖಂಡ ನಲಪ್ಪಾಡ್ ನನ್ನ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು ರಮ್ಯಾ. ಆ ಮೂಲಕ ವರ್ಷಗಳ ಹಿಂದೆ 2018ರಲ್ಲಿ ಇದೇ ನಲಪಾಡ್ ವಿದ್ವತ್ ಅನ್ನೋ ಯುವಕನ ಮೇಲೆ ಸಿಲ್ಲಿ ಕಾರಣಕ್ಕೆ ನಡೆಸಿದ್ದ ಹಲ್ಲೆಯನ್ನೂ ನೆನಪಿಸಿದರು. ಆ ಘಟನೆಯಲ್ಲಿ ಆ ಯುವಕನನ್ನು ರಕ್ಷಿಸಿದ್ದವರು ಗುರು ರಾಜಕುಮಾರ್. ಇನ್ನೊಂದು ಘಟನೆಯಲ್ಲಿ ಕಾರನ್ನು ಯರ್ರಾಬಿರ್ರಿ ಓಡಿಸಿ, ಆಕ್ಸಿಡೆಂಟ್ ಮಾಡಿ ಓಡಿಹೋಗಿದ್ದ ಘಟನೆಯನ್ನೂ ನೆನಪಿಸಿದರು. ಅಲ್ಲಿಗೆ ಯುದ್ಧ ಘೋಷಣೆಯಾಗಿತ್ತು.

ಏನಿದು 8 ಕೋಟಿ ಕೇಸ್..?

ಇದೆಲ್ಲಕ್ಕೂ ಕಾರಣ ಏನು ಎಂದು ಹುಡುಕಿದಾಗ ರಮ್ಯಾ ಅವರೇ ಆ ಕಥೆ ನೆನಪಿಸಿದರು. ನಾನು ಕಾಂಗ್ರೆಸ್ ಬಿಟ್ಟಾಗ ಕೆಲವರು ನಾನು 8 ಕೋಟಿ ಎತ್ತಿಕೊಂಡು ಹೋಗಿದ್ದೇನೆ ಎಂದು ಸುದ್ದಿ ವಾಹಿನಿಗಳಲ್ಲಿ ಸುದ್ದಿಯಾಗುವಂತೆ ನೋಡಿಕೊಂಡರು. ನನ್ನ ಗೌರವವನ್ನು ಹರಾಜು ಮಾಡಿದರು. ನಾನು ನನ್ನ ಪರ್ಸನಲ್ ಕಾರಣಕ್ಕೆ ಕಾಂಗ್ರೆಸ್ ಬಿಟ್ಟೆನೇ ಹೊರತು, ಇನ್ಯಾವುದೂ ಕಾರಣ ಇರಲಿಲ್ಲ. ಆವತ್ತು ನಾನು ಮಾಡಿದ ತಪ್ಪು ಮೌನವಾಗಿದ್ದು. ಇನ್ನೂ ಅದನ್ನು ಸಹಿಸಿಕೊಂಡಿರೋಕೆ ಸಾಧ್ಯವಿಲ್ಲ. ವೇಣುಗೋಪಾಲ್ ಅವರೇ.. ನೀವು ಬೆಂಗಳೂರಿಗೆ ಬಂದಾಗ ಈ ವಿಷಯವನ್ನು ಸ್ಪಷ್ಟಪಡಿಸಿ. ಇದೇ ನೀವು ನನಗೆ ಮಾಡಬಹುದಾದ ಉಪಕಾರ ಎಂದಿದ್ದಾರೆ ರಮ್ಯಾ.