ಕೆಜಿಎಫ್ ಚಾಪ್ಟರ್ 2 ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ ದಾಖಲೆಗಳ ಮೇಲೆ ದಾಖಲೆ ಬರೆದು.. ಹಳೆದ ರೆಕಾರ್ಡುಗಳನ್ನೆಲ್ಲ ಚಿಂದಿ ಚಿಂದಿ ಮಾಡಿ.. ಹೊಸ ಹೊಸ ದಾಖಲೆಗಳನ್ನೆಲ್ಲ ಗಂಟುಮೂಟೆ ಕಟ್ಟಿ ಹೊತ್ತುಕೊಂಡಿದೆ. ಆ ದಾಖಲೆಗಳಿಗೆ ಇನ್ನೂ ಹೊಸ ಹೊಸ ದಾಖಲೆಗಳು ಸೇರುತ್ತಲೇ ಇವೆ. ಕಲೆಕ್ಷನ್‍ನಲ್ಲಿ ಅರ್ಥಾತ್ ಬಾಕ್ಸಾಫೀಸ್ ಕಲೆಕ್ಷನ್‍ನಲ್ಲಿ 1200 ಕೋಟಿ ಸಮೀಪದಲ್ಲಿರೋ ಕೆಜಿಎಫ್ ಚಾಪ್ಟರ್ 2 ಎದುರು ಇರೋದು ಬಾಹುಬಲಿ 2 ರೆಕಾರ್ಡ್ ಮಾತ್ರ. ಆದರೆ, ನಾವಿಲ್ಲಿ ಹೇಳ್ತಿರೋದು ಬಾಕ್ಸಾಫೀಸ್ ಕಲೆಕ್ಷನ್‍ನ ದುಡ್ಡಿನ ದಾಖಲೆ ಅಲ್ಲ. ಎಷ್ಟು ಜನ ಕೆಜಿಎಫ್ ಅನ್ನು ನೋಡಿದರು ಅನ್ನೋ ರಿಪೋರ್ಟ್.
1975ರಲ್ಲಿ ರಿಲೀಸ್ ಆಗಿದ್ದ ಭಾರತೀಯ ಚಿತ್ರರಂಗದ ಟ್ರೆಂಡ್ ಸೆಟ್ಟರ್ ಶೋಲೆಯನ್ನು ಆಗಿನ ಕಾಲಕ್ಕೆ ಟಿಕೆಟ್ ಖರೀದಿಸಿ ನೋಡಿದ್ದವರ ಸಂಖ್ಯೆ 18 ಮಿಲಿಯನ್ ಅರ್ಥಾತ್ 1 ಕೋಟಿ 80 ಲಕ್ಷ ಜನ.
ಸನ್ನಿಡಿಯೋಲ್, ಅಮಿಶಾ ಪಟೇಲ್ ಅಭಿನಯದ ಇಂಡಿಯನ್ ಪಾಕಿಸ್ತಾನ್ ಹುಡುಗ ಹುಡುಗಿ ಲವ್ ಸ್ಟೋರಿ ಗದ್ದರ್ ಏಕ್ ಪ್ರೇಮ್‍ಕಥಾ ಚಿತ್ರವನ್ನು 5.05 ಕೋಟಿ ಜನ ನೋಡಿದ್ದರು. ಸಲ್ಮಾನ್ ಖಾನ್, ಮಾಧುರಿ ದೀಕ್ಷಿತ್ ಅಭಿನಯದ ಹಮ್ ಆಪ್ಕೆ ಹೈ ಕೌನ್ ಚಿತ್ರವನ್ನು ಟಿಕೆಟ್ ಕೊಂಡು ನೋಡಿದ್ದ ಪ್ರೇಕ್ಷಕರ ಸಂಖ್ಯೆ 7.39 ಕೋಟಿ.
ರಾಜಮೌಳಿಯ ಬಾಹುಬಲಿ 2 ಚಿತ್ರವನ್ನು ನೋಡಿದ್ದ ಪ್ರೇಕ್ಷಕರ ಸಂಖ್ಯೆ 5.25 ಕೋಟಿ. ಶಾರೂಕ್-ಕಾಜಲ್ ಲವ್ ಸ್ಟೋರಿ, ದಿಲ್‍ವಾಲೆ ದುಲ್ಹನಿಯಾ ಜಾಯೇಂಗೆ ಚಿತ್ರ ನೋಡಿದ್ದ ಪ್ರೇಕ್ಷಕರ ಸಂಖ್ಯೆ 4 ಕೋಟಿ 70 ಲಕ್ಷ.
ಅಮೀರ್ ಖಾನ್- ಕರಿಷ್ಮಾ ಕಪೂರ್ ಅಭಿನಯದ ರಾಜಾ ಹಿಂದೂಸ್ತಾನಿಯ 4.09 ಕೋಟಿ ಟಿಕೆಟ್ ಮಾರಾಟವಾಗಿದ್ದವು.
ಆದರೆ ಇವೆಲ್ಲವನ್ನೂ ಪುಡಿಗಟ್ಟಿರುವ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಿದವರ ಸಂಖ್ಯೆ ಐದೂವರೆ ಕೋಟಿ ಎನ್ನುವ ಅಂದಾಜು ಸದ್ಯಕ್ಕೆ ಸಿಕ್ಕಿದೆ. ಕನ್ನಡ ಮತ್ತು ತಮಿಳಿನಲ್ಲಿ ತಲಾ 70 ಲಕ್ಷ ಜನ, ತೆಲುಗಿನಲ್ಲಿ 80 ಲಕ್ಷ ಜನ, ಮಲಯಾಳಂನಲ್ಲಿ 45 ಲಕ್ಷ ಜನ ಸಿನಿಮಾ ನೋಡಿದ್ದರೆ ಹಿಂದಿಯಲ್ಲಿ ಅಂದಾಜು ಎರಡೂವರೆ ಕೋಟಿ ಜನ ಕೆಜಿಎಫ್ 2 ಸಿನಿಮಾ ನೋಡಿದ್ದಾರೆ.