ಹೊಸ ಪ್ರತಿಭೆಗಳನ್ನು ಹುಡುಕುವ ವಿಚಾರದಲ್ಲಿ ನಿರ್ದೇಶಕ ಶಶಾಂಕ್ ಇತರರಿಗಿಂತ ಒಂದು ಹೆಜ್ಜೆ ಸದಾ ಮುಂದು. ತಮ್ಮ ಪ್ರತೀ ಚಿತ್ರಗಳಲ್ಲೂ ಹೊಸ ಹೊಸ ಪ್ರತಿಭೆಗಳನ್ನು ಪರಿಚಯಿಸುತ್ತಲೇ ಇರೋ ಶಶಾಂಕ್ ಅವರ ಅತಿ ದೊಡ್ಡ ಶೋಧ ಯಶ್ ಮತ್ತು ರಾಧಿಕಾ ಪಂಡಿತ್. ಅದೇ ಹಾದಿಯಲ್ಲಿ ಲವ್ 360 ಅನ್ನೋ ಹೊಸ ಸಿನಿಮಾ ಸೃಷ್ಟಿಸಿರೋ ಶಶಾಂಕ್ ಈ ಚಿತ್ರದಲ್ಲೂ ಹೊಸಬರಿಗೆ ಚಾನ್ಸ್ ಕೊಟ್ಟಿದ್ದಾರೆ. ಚಿತ್ರದ ಹೀರೋ ಪ್ರವೀಣ್ ಕಂಪ್ಲೀಟ್ ಹೊಸಬರಾದರೆ, ನಾಯಕಿ ರಚನಾ ಇಂದರ್ ಲವ್ ಮಾಕ್ಟೇಲ್‍ನಲ್ಲಿ ಹೆಂಗೆ ನಾವು ಪಾತ್ರದಿಂದ ಫೇಮಸ್ ಆದವರು.
ಹೀರೋ ಪ್ರವೀಣ್ ವೃತ್ತಿಯಲ್ಲಿ ಡಾಕ್ಟರ್. ಅವರಷ್ಟೇ ಅಲ್ಲ, ಅವರ ಅಪ್ಪ, ಅಮ್ಮ.. ಇಡೀ ಫ್ಯಾಮಿಲಿಯೇ ಡಾಕ್ಟರ್ಸ್ ಫ್ಯಾಮಿಲಿ. ಎಂಬಿಬಿಎಸ್ ಓದುವಾಗಲೂ ಆದರ್ಶ ಫಿಲಂ ಇನ್ಸ್‍ಟಿಟ್ಯೂಟ್‍ಗೆ ಹೋಗುತ್ತಿದ್ದ ಪ್ರವೀಣ್‍ರ ಸಿನಿಮಾ ಆಸೆ ಅಪ್ಪನಿಗೆ ಇಷ್ಟ ಇರಲಿಲ್ಲ. ಹಾಗಾಗಿ ಆಸೆಯನ್ನೇ ಬಿಟ್ಟಿದ್ದರಂತೆ ಪ್ರವೀಣ್. ಅಪ್ಪ ತೀರಿಕೊಂಡ ಮೇಲೆ ಅಮ್ಮನ ಬಳಿ ಆಸೆ ಹೇಳಿಕೊಂಡಿದ್ದಾರೆ. ಪ್ರವೀಣ್ ಅವರ ತಾಯಿಗೆ ಶಶಾಂಕ್ ಪರಿಚಯವಿತ್ತು. ಮಗನ ಸಿನಿಮಾವನ್ನು ತಾವೇ ನಿರ್ಮಾಣ ಮಾಡೋಕೆ ಮುಂದಾದರು. ಆದರೆ ಹೊಸಪೇಟೆ ಬಳಿಯ ಮಾರಮ್ಮನಹಳ್ಳಿಯಲ್ಲಿ ಆಸ್ಪತ್ರೆಯನ್ನೂ ಹೊಂದಿರೋ ಅವರ ಬಳಿ ಸಿನಿಮಾಗೆ ಬೇಕಾಗುಷ್ಟು ಪೂರ್ತಿ ಹಣ ಇರಲಿಲ್ಲ. ಕಾರಣ ಬೇರೇನಿಲ್ಲ, ಅವರ ಆಸ್ಪತ್ರೆ ವ್ಯವಹಾರಕ್ಕಿಂತ ಹೆಚ್ಚು ಉಚಿತ ಸೇವೆ ನೀಡುತ್ತಿದೆ. ಇದು ಗೊತ್ತಾದ ಶಶಾಂಕ್, ಸಿನಿಮಾ ನಿರ್ಮಾಣಕ್ಕೆ ತಾವೂ ಕೈಜೋಡಿಸಿದ್ದಾರೆ. ಶಶಾಂಕ್ ಸಿನಿಮಾಸ್‍ನಲ್ಲೀಗ ಸಿನಿಮಾ ರೆಡಿಯಾಗಿದೆ.
ಡಾಕ್ಟರ್ ಪ್ರವೀಣ್ ಆದ ನಾನು ಚಿತ್ರದಲ್ಲಿ ಮೆಕಾನಿಕ್ ಪಾತ್ರ ಮಾಡಿದ್ದೇನೆ. ಸಿನಿಮಾಗೆ ಬರುವ ಮುಂಚೆ ಶಶಾಂಕ್ ಹಲವು ವರ್ಕ್‍ಶಾಪ್ ಮಾಡಿ ತರಬೇತಿ ಕೊಟ್ಟ ಮೇಲೆಯೇ ಕ್ಯಾಮೆರಾ ಮುಂದೆ ನಿಲ್ಲಿಸಿದರು ಎನ್ನುವ ಪ್ರವೀಣ್‍ಗೆ ಸಿನಿಮಾ ಮೇಲೆ ಭರವಸೆ ಇದೆ.
ಲವ್‍ಮಾಕ್ಟೇಲ್‍ನಲ್ಲಿ ಜನ ಗುರುತಿಸಿದರೂ ಸಿಂಗಲ್ ಹೀರೋಯಿನ್ ಆಗಿ ಇದು ನನಗೆ ಮೊದಲ ಸಿನಿಮಾ. ಸಿನಿಮಾ ಅಡಿಷನ್‍ಗೆ ನನ್ನ ಅಮ್ಮ ಝುಮ್ಕಿ, ಉದ್ದ ಜಡೆ ಹಾಕಿಸಿಕೊಂಡು ಕರೆದುಕೊಂಡು ಹೋಗಿದ್ದರು. ನಾನೇ ಇದೆಲ್ಲ ಯಾಕೆ ಎನ್ನುತ್ತಿದ್ದೆ. ಆದರೆ ಶಶಾಂಕ್ ಅವರಿಗೆ ಅದೇ ಇಷ್ಟವಾಗಿ ಹೀರೋಯಿನ್ ಆಗಿ ಆಯ್ಕೆ ಮಾಡಿದರು ಎನ್ನುತ್ತಾರೆ ರಚನಾ ಇಂದರ್.
ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಭರವಸೆ ಹುಟ್ಟಿಸಿವೆ. ಶಶಾಂಕ್ ಸಿನಿಮಾ ಆಗಿರೋ ಕಾರಣ ಚೆಂದದ ಕಥೆ ಪಕ್ಕಾ ಇರುತ್ತೆ ಅನ್ನೋದು ಗ್ಯಾರಂಟಿ.