ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ನಂತಹಾ ಚಿತ್ರಗಳನ್ನು ನಿರ್ದೇಶಿಸಿದ್ದ ಕೃಷ್ಣ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ಹೀರೋ ಆಗಿರೋದು ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಷ್. ಸೂರಿ ನಿರ್ದೇಶನದ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ ನಟಿಸುತ್ತಿರೋ ಅಭಿಷೇಕ್ ಕೃಷ್ಣ ಹೇಳಿರೋ ಕಥೆಗೆ ಓಕೆ ಎಂದಿದ್ದಾರೆ. ಚಿತ್ರದಲ್ಲಿರೋದು ಕಾವೇರಿ ಹೋರಾಟದ ಹಿನ್ನೆಲೆಯ ಕಥೆ. ಚಿತ್ರಕ್ಕೆ ಕಾಳಿ ಅನ್ನೋ ಟೈಟಲ್ ಇಟ್ಟಿದ್ದಾರೆ.
ಕಾವೇರಿ ಹೋರಾಟದ ವೇಳೆ ಕನ್ನಡದ ಹುಡುಗ ಮತ್ತು ತಮಿಳು ಹುಡುಗಿಯ ನಡುವಿನ ಕಥೆ ಇದು. ಕೃಷ್ಣ ತಾವು ಕಣ್ಣಾರೆ ನೋಡಿದ ಘಟನೆಯನ್ನೇ ಸಿನಿಮಾ ಮಾಡುತ್ತಿದ್ದಾರೆ.
1991ರ ಸಮಯದಲ್ಲಿ ಕಾವೇರಿ ಗಲಾಟೆ ಬಹಳ ಜೋರಾಗಿ ನಡೆಯುತ್ತಿತ್ತು. ಈ ಹೊತ್ತಿನಲ್ಲಿ ಕೊಳ್ಳೇಗಾಲ, ಮಹದೇಶ್ವರ ಬೆಟ್ಟ ಪ್ರದೇಶದಲ್ಲಿ ನಡೆದ ಪ್ರೇಮಕಥೆ ಇದು. ಕಾವೇರಿ ಗಲಾಟೆ ಇಲ್ಲಿ ಹಿನ್ನೆಲೆ ಮಾತ್ರ. ನಾಯಕನಿಗೂ.. ನಾಯಕಿಗೂ ಸಂಬಂಧ ಇರಲ್ಲ. ಆದರೂ ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅವರು ಆ ತೊಂದರೆಗೆ ಸಿಕ್ಕಿದ್ದು ಹೇಗೆ ಅನ್ನೋದನ್ನೇ ಸಿನಿಮಾದಲ್ಲಿ ತೋರಿಸುತ್ತೇವೆ ಎಂದಿದ್ದಾರೆ ಕೃಷ್ಣ.
ಹಾಗಂತ ಇದು ಬೇರೆ ಜಾನರ್ ಸ್ಟೋರಿಯೂ ಅಲ್ಲ. ಲವ್ ಸ್ಟೋರಿ ಆದರೂ ಕಮರ್ಷಿಯಲ್ ಎಂಟರ್‌ಟೇನರ್. ಪಕ್ಕಾ ಕಮರ್ಷಿಯಲ್ ಸಿನಿಮಾ. ಅಂಬರೀಷ್ ಹುಟ್ಟುಹಬ್ಬದ ದಿನ ಸಿನಿಮಾ ಘೋಷಣೆ ಮಾಡುತ್ತೇವೆ ಎಂದಿದ್ದಾರೆ ಕೃಷ್ಣ. ಕೊಳ್ಳೇಗಾಲ, ಮಹದೇಶ್ವರ ಬೆಟ್ಟದ ಜಾನಪದ ಸಂಸ್ಕೃತಿಯನ್ನು ಸಂಗೀತದಲ್ಲಿ ಬಳಸಿಕೊಳ್ಳಲು ನಿರ್ದೇಶಕರು ಯೋಚಿಸಿದ್ದಾರೆ. ಸೋಲಿಗರ ಪದ, ಮಂಟೆಸ್ವಾಮಿ ಪದಗಳೂ ಚಿತ್ರದಲ್ಲಿ ಬರಲಿವೆ. ಅಭಿಷೇಕ್ ಹಳ್ಳಿ ಹುಡುಗನಾಗಿರುತ್ತಾರೆ. ಕಾಲೇಜಿಗೆ ಹೋಗುವ ರೈತರ ಮಗ. ಬ್ಯಾಡ್ ಮ್ಯಾನರ್ಸ್ ಶೂಟಿಂಗ್ ಮುಗಿದ ನಂತರ ಕಾಳಿ ಶೂಟಿಂಗ್ ಶುರುವಾಗಲಿದೆ.