ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್ ರವಿಚಂದ್ರನ್ ನಾಯಕನಾಗಿ ನಟಿಸಿರುವ ತ್ರಿವಿಕ್ರಮ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಕ್ರಂರನ್ನು ಲಾಂಚ್ ಮಾಡುತ್ತಿರೋದು ನಿರ್ದೇಶಕ ಸಹನಾಮೂರ್ತಿ ಮತ್ತು ನಿರ್ಮಾಪಕ ಸೋಮಣ್ಣ. ಚಿತ್ರದಲ್ಲಿ ಹೀರೋಯಿನ್ ಆಗಿ ಆಕಾಂಕ್ಷಾ ಶರ್ಮ ನಟಿಸಿದ್ಧಾರೆ. ಚಿತ್ರದ ಬಿಡುಗಡೆ ಘೋಷಿಸಲು ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಅಣ್ಣ ಮನುರಂಜನ್ ರವಿಚಂದ್ರನ್ ಕೂಡಾ ಇದ್ದು ತಮ್ಮನ ಚಿತ್ರಕ್ಕೆ ಶುಭ ಕೋರಿದರು. ನಟಿ ತಾರಾ, ಸಾಧುಕೋಕಿಲ, ಶರಣ್, ಆದಿ ಲೋಕೇಶ್, ನಿರ್ದೇಕರಾದ ಶಿವಮಣಿ, ಸಂತೋಷ್ ಆನಂದರಾಮ್, ಚೇತನ್ ಕುಮಾರ್ ಮೊದಲಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಲು ಆಗಮಿಸಿದ್ದರು.
ಸಿನಿಮಾ ಪೂರ್ತಿಯಾಗಿ 3 ವರ್ಷವಾಯಿತು. ಕೋವಿಡ್ ಕಾರಣದಿಂದ ತಡವಾಯಿತು ಎಂದ ವಿಕ್ರಂ, ಚಿತ್ರದ ಕಥೆ ಅಪ್ಪನಿಗೆ ಗೊತ್ತಿಲ್ಲ. ಆದರೆ ಇಡೀ ಕಥೆಯನ್ನು ಶಿವಣ್ಣ ಮತ್ತು ಪುನೀತ್ ಕೇಳಿದ್ದರು. ಪುನೀತ್ ಕಥೆ ಇಷ್ಟಪಟ್ಟು ನಾನು ಒಂದು ಹಾಡು ಹಾಡ್ತೀನಿ. ಚೆನ್ನಾಗಿ ಡ್ಯಾನ್ಸ್ ಮಾಡಬೇಕು. ಇಲ್ಲ ಅಂದ್ರೆ ಹೊಡೀತೀನಿ ಎಂದಿದ್ದರು ಎಂದು ಭಾವುಕರಾದರು. ನಾನು ರವಿಚಂದ್ರನ್ ಅವರ ಮಗ ಹೌದು. ಆದರೆ ಚಿತ್ರರಂಗಕ್ಕೆ ಹೊಸಬ. ನಮ್ಮ ಚಿತ್ರವನ್ನು ನೋಡಿ ಹಾರೈಸಿ ಎಂದ ವಿಕ್ರಂ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಧನ್ಯವಾದ ಹೇಳಿದರು.
ಮಿಡಲ್ ಕ್ಲಾಸ್ ಫ್ಯಾಮಿಲಿ ಹುಡುಗ, ಹೈ ಕ್ಲಾಸ್ ಫ್ಯಾಮಿಲಿ ಹುಡುಗಿಯನ್ನು ಏಕೆ ಲವ್ ಮಾಡಬಾರದು ಎಂಬ ವಿಷಯವೇ ಚಿತ್ರದ ಕಥೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಟನಾಗಿ ನಾನು ವಿಕ್ರಂ ಅವರಿಗೆ ನೂರಕ್ಕೆ ನೂರು ಅಂಕ ಕೊಡುತ್ತೇನೆ ಎಂದರು ನಿರ್ದೇಶಕ ಸಹನಾ ಮೂರ್ತಿ.