` ಡಾಲಿ ವಿರುದ್ಧ ದೂರು. ಹಿಂದೆ ಇರೋದು ಯಾರು? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಡಾಲಿ ವಿರುದ್ಧ ದೂರು. ಹಿಂದೆ ಇರೋದು ಯಾರು?
Ajith Jayaraj, Head Bush Movie Image

ಹೆಡ್ ಬುಷ್. ಇದು ಡಾಲಿ ಧನಂಜಯ್ ನಿರ್ಮಾಪಕರಾಗಿರೋ ಇನ್ನೊಂದು ಸಿನಿಮಾ. ಈಗಾಗಲೇ ಶೂಟಿಂಗ್ ಕೂಡಾ ಮುಗಿದಿದೆ. ಡಾಲಿ ಜೊತೆ ಚಿತ್ರದಲ್ಲಿ ಘಟಾನುಘಟಿಗಳೇ ನಟಿಸಿದ್ದಾರೆ. 5 ಭಾಷೆಗಳಲ್ಲಿ ಬರುತ್ತಿರೋ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರೋದು ಒಂದಾನೊಂದು ಕಾಲದಲ್ಲಿ ಡಾನ್ ಎಂ.ಪಿ. ಜಯರಾಜ್ ಲೈಫ್‍ನ್ನು ಹತ್ತಿರದಿಂದ ನೋಡಿರೋ ಅಗ್ನಿ ಶ್ರೀಧರ್. ಡಾಲಿ ಚಿತ್ರದಲ್ಲಿ ಎಂ.ಪಿ.ಜಯರಾಜ್ ಪಾತ್ರ ಮಾಡುತ್ತಿದ್ದಾರೆ. ಶೂನ್ಯ ಚಿತ್ರದ ಡೈರೆಕ್ಟರ್. ಕ್ರೇಜಿ ಸ್ಟಾರ್ ರವಿಚಂದ್ರನ್, ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ, ರಘು ಮುಖರ್ಜಿ, ಪಾಯಲ್ ರಹ್ತೋಗಿ ಸೇರಿದಂತೆ ಹಲವರು ನಟಿಸಿರೋ ಚಿತ್ರದ ವಿರುದ್ಧ ಈಗ ಫಿಲಂ ಚೇಂಬರ್`ಗೆ ದೂರು ಹೋಗಿದೆ. ದೂರು ನೀಡಿರೋದು ಜಯರಾಜ್ ಪುತ್ರ ಅಜಿತ್.

ನನ್ನ ತಂದೆಯ ಬಯೋಪಿಕ್ ಮಾಡುವಾಗ ಮಾಡುವಾಗ ನನ್ನ ಅನುಮತಿ ತೆಗೆದುಕೊಂಡಿಲ್ಲ. ಅವರಿಗೆ ಬೇಕಾದಂತೆ ಕಥೆ ಮಾಡಿಕೊಂಡಿದ್ದಾರೆ. ಸಿನಿಮಾ ಶುರುವಾದ ಕೂಡಲೇ ಚಿತ್ರತಂಡದವರನ್ನು ಕಾಂಟ್ಯಾಕ್ಟ್ ಮಾಡೋಕೆ ಪ್ರಯತ್ನ ಪಟ್ಟೆ. ಆಗಲಿಲ್ಲ. ಈಗ ರಿಲೀಸ್ ಆಗಿರುವ ಟ್ರೇಲರಿನಲ್ಲಿ ನನ್ನ ತಂದೆಯನ್ನು ಕೆಟ್ಟದಾಗಿ ಬಿಂಬಿಸಲಾಗಿದೆ. ನನ್ನ ಅಪ್ಪನ ಎದುರು ನಿಂತು ಮಾತನಾಡೋಕೂ ಹೆದರುತ್ತಿದ್ದವರು ಈಗ ಅವನು.. ಇವನು ಅಂತೆಲ್ಲ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ನನಗೆ ನೋವಾಗಿದೆ. ಚಿತ್ರದ ಬಿಡುಗಡೆಗೆ ಅವಕಾಶ ಕೊಡಬಾರದು ಎನ್ನುವುದು ಅಜಿತ್ ಜಯರಾಜ್ ವಾದ. ಆದರೆ ವಿವಾದಗಳು ಬೆಳೆದು ಬಂದ ಹಾದಿ ನೋಡಿದರೆ ಹಲವು ಪ್ರಶ್ನೆಗಳೇಳುತ್ತವೆ. ಡಾಲಿ ಧನಂಜಯ್ ಕೂಡಾ ಅದೇ ಮಾತು ಕೇಳ್ತಾರೆ. ಡಾಲಿ ಪ್ರಕಾರ..

``ಸಿನಿಮಾ ಸೆಟ್ಟೇರುವುದು ಎಲ್ಲರಿಗೂ ಗೊತ್ತಿತ್ತು. ಹೆಡ್ ಬುಷ್ ಶುರುವಾದಾಗ ಅಜಿತ್ ಕೂಡಾ ವಿಷ್ ಮಾಡಿದ್ದರು. ಆದರೆ ಈಗ ವಿವಾದ ಮಾಡುತ್ತಿದ್ದಾರೆ. ನನಗೆ ಅಜಿತ್ ಒಳ್ಳೆಯ ಫ್ರೆಂಡ್. ಅವರ ಒಂದು ಚಿತ್ರಕ್ಕೆ ನಾನು ವಾಯ್ಸ್ ಕೊಟ್ಟಿದ್ದೇನೆ. ಸಿನಿಮಾ ಶುರುವಾದಾಗ ಜೊತೆಯಲ್ಲಿದ್ದು ಈಗ ಕುಂಭಳಕಾಯಿ ಒಡೆದ ಮೇಲೆ ತಗಾದೆ ತೆಗೆದಿದ್ದಾರೆ. ಚಿತ್ರಕ್ಕೆ ಕಥೆ ಬರೆದಿರೋದು ಅಗ್ನಿ ಶ್ರೀಧರ್. ಅವರ ಬಳಿ ನಾನು ಹಕ್ಕು ಖರೀದಿಸಿದ್ದೇನೆ. ಒಬ್ಬ ನಿರ್ಮಾಪಕನಾಗಿ ಚಿತ್ರಕ್ಕೆ ಹಣ ಮತ್ತು ಶ್ರಮ ಹಾಕಿದ್ದೇನೆ. ಈ ಹಂತದಲ್ಲಿ ಚಿತ್ರದ ಬಿಡುಗಡೆ ಮಾಡಬಾರದು ಎಂದು ದೂರು ಕೊಡೋದರ ಹಿಂದೆ ಬೇರೆ ಯಾರೋ ಇದ್ದಾರೆ''

ಹೌದು ಎನ್ನಿಸೋಕೆ ಕಾರಣಗಳೂ ಇವೆ.

ಅಜಿತ್ ಮಾತಿನಲ್ಲಿ ಟ್ರೇಲರಿನಲ್ಲಿ ಜಯರಾಜ್ ಅವರನ್ನು ಕೆಟ್ಟದಾಗಿ ತೋರಿಸಿದ್ದಾರೆ ಎನ್ನುತ್ತಾರೆ. ಆದರೆ, ಹೆಡ್ ಬುಷ್ ಟ್ರೇಲರ್ ಇನ್ನೂ ರಿಲೀಸ್ ಆಗಿಲ್ಲ.

ದೈವಾಂಶ ಸಂಭೂತನಂತೆ ಜಯರಾಜ್`ನನ್ನ ತೋರಿಸೋಕೆ ಆತನೇನು ದೈವಾಂಶ ಸಂಭೂತ ವ್ಯಕ್ತಿಯಲ್ಲ. ರೌಡಿಯಾಗಿದ್ದವನು. ಕ್ರಿಮಿನಲ್ ಹಿಸ್ಟರಿ ಇದೆ.

ವೈಯಕ್ತಿಕವಾಗಿ ಸ್ನೇಹಿತರಾಗಿದ್ದೂ ಡಾಲಿ ಧನಂಜಯ್ ಜೊತೆ ಮಾತನಾಡದೆ, ಅವರ ವಿರುದ್ಧ ನೇರವಾಗಿ ಚೇಂಬರ್`ಗೆ ಬಂದು ದೂರು ಕೊಟ್ಟಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ಸದ್ಯಕ್ಕೆ ಹೆಡ್ ಬುಷ್ ಚಿತ್ರಕ್ಕೆ ವಿವಾದವೊಂದು ಸುತ್ತಿಕೊಂಡಿದೆ. ಬೇಗ ಬಗೆಹರಿಯಲಿ.