ಅದು ಲಹರಿ ಸಂಸ್ಥೆ ಆಯೋಜಿಸಿದ್ದ ರಿಕ್ಕಿ ಕೇಜ್ ಸನ್ಮಾನ ಸಮಾರಂಭ. ಇತ್ತೀಚೆಗಷ್ಟೇ ಸಂಗೀತ ಲೋಕದ ಪ್ರತಿಷ್ಟಿತ ಗ್ರ್ಯಾಮಿ ಅವಾರ್ಡ್‍ಗೆ ಪಾತ್ರರಾಗಿರುವ ರಿಕ್ಕಿ ಕೇಜ್ ಅವರಿಗಾಗಿ ಲಹರಿ ಸಂಸ್ಥೆ ಏರ್ಪಡಿಸಿದ್ದ ಕಾರ್ಯಕ್ರಮವದು. ಏಕೆಂದರೆ ರಿಕ್ಕಿ ಅವರ ಗ್ರ್ಯಾಮಿ ಅವಾರ್ಡ್ ಪುರಸ್ಕøತ ಡಿವೈನ್ ನೈಟ್ಸ್ ಆಲ್ಬಂ ಹೊರತರುತ್ತಿರುವುದು ಇದೇ ಲಹರಿ. ಜೊತೆಗೆ ಸಂಸ್ಥೆಗೆ 48 ವರ್ಷ ತುಂಬಿದ ಸಂಭ್ರಮ ಬೇರೆ.. ಕಾರ್ಯಕ್ರಮದಲ್ಲಿ ಲಹರಿ ಸಂಸ್ಥೆಯ ವೇಲು, ಮನೋಹರ್ ನಾಯ್ಡು ಜೊತೆಗೆ ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್, ರವಿಚಂದ್ರನ್, ಶಿವಣ್ಣ, ಕೆ.ಪಿ.ಶ್ರೀಕಾಂತ್, ಗುರುಕಿರಣ್, ವಸಿಷ್ಠ ಸಿಂಹ, ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ಪಬ್ಲಿಕ್ ಟಿವಿ ರಂಗನಾಥ್ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು. ಸಮಾರಂಭದಲ್ಲಿ ಮಾತನಾಡುತ್ತಾ ಇದು ಲಹರಿ ಸಂಸ್ಥೆಯ ಸಮಾರಂಭ ಅಲ್ಲ, ನನ್ನ ಮನೆಯ ಸಮಾರಂಭ ಎನ್ನುತ್ತಲೇ ಮಾತು ಆರಂಭಿಸಿದ ರವಿಚಂದ್ರನ್ ಕೆಜಿಎಫ್ ದಾಖಲೆ ಮುರಿಯುವುದೇ ಎಲ್ಲರ ಗುರಿಯಾಗಬೇಕು ಎಂದರು.
ಇಂತಹ ಸಾಹಸಕ್ಕೆ ಕೈಹಾಕುವವರನ್ನು ಎಲ್ಲರೂ ಹುಚ್ಚರು ಎನ್ನುತ್ತಾರೆ. ಅಂತಹವರಿಂದಲೇ ಇಂತಹ ಕೆಲಸಗಳಾಗಿರೋದು. ದಶಕಗಳ ಹಿಂದೆ ನಾನು ಶಾಂತಿಕ್ರಾಂತಿ ಮಾಡಿದಾಗ ಎಲ್ಲರೂ ನನ್ನನ್ನು ಹುಚ್ಚ ಎಂದಿದ್ದರು. ಆಗ ನಾನು ಬುನಾದಿ ಹಾಕಿದ್ದೆ. ಆದರೆ ಸೋತಿದ್ದೆ. ಈಗ ಕೆಜಿಎಫ್ ಮೂಲಕ ಅದನ್ನು ಸಾಧಿಸಿ ತೋರಿಸಿದ್ದಾರೆ. ನಾನು ಸಿನಿಮಾ ಮಾಡುವಾಗ ಚೇಂಬರ್‍ನಲ್ಲಿ ನನ್ನ ಸಿನಿಮಾಗಳ ಟಿಕೆಟ್ ದರ ಏರಿಸಬೇಕು ಎಂದು ಗಲಾಟೆ ಮಾಡಿದ್ದೆ. ಆಗ ಗಲಾಟೆಯಾಗಿತ್ತೇ ಹೊರತು, ಟಿಕೆಟ್ ದರ ಏರಿಸೋಕೆ ಆಗಿರಲಿಲ್ಲ. ಈಗ ಇದೇ ಜನ ಕೆಜಿಎಫ್ ಚಿತ್ರವನ್ನು 2 ಸಾವಿರ ಕೊಟ್ಟು ನೋಡಿದ್ದಾರೆ. ಈಗ ಹೊಂಬಾಳೆಯವರು ಒಂದು ದಾಖಲೆ ಬರೆದಿದ್ದಾರೆ. ಈಗ ಅದನ್ನು ಸಂಭ್ರಮಿಸಬೇಕು. ಹೊಟ್ಟೆಉರಿ ಪಡಬಾರದು. ಅದನ್ನು ಸಂಭ್ರಮಿಸುತ್ತಲೇ ಆ ಕೆಜಿಎಫ್ ದಾಖಲೆಯನ್ನು ಮುರಿಯಲು ಮುಂದಾಗಬೇಕು ಎಂದಿದ್ದಾರೆ ರವಿಚಂದ್ರನ್.
ದಾಖಲೆಗಳಿರೋದೇ ಮುರಿಯೋದಕ್ಕೆ ಅಲ್ಲವಾ..