ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳ ಸದ್ದು ಜೋರಾಗಿದೆ. ಎಲ್ಲರೂ ಮಿನಿಮಮ್ 5 ಭಾಷೆಗಳಲ್ಲಿ ಸಿನಿಮಾ ಮಾಡ್ತಿದ್ದಾರೆ. ಈಗ ಎಲ್ಲೆಡೆ ಕನ್ನಡ ಮತ್ತು ತೆಲುಗು ಚಿತ್ರಗಳದ್ದೇ ಸದ್ದು. ಕೆಜಿಎಫ್, ಆರ್.ಆರ್.ಆರ್. ಪುಷ್ಪ ಸರಣಿ ಮುಂದುವರೆಯುತ್ತಿವೆ. ಇದೇ ವೇಳೆ ಕನ್ನಡದಲ್ಲಿ ಮತ್ತೊಮ್ಮೆ ಸಿನಿಮಾ ಮಾಡೋಕೆ ಬಂದಿರೋ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮುಂಬೈನಲ್ಲಿ ದಕ್ಷಿಣದ ಭಾಷೆಗಳ ಬಗ್ಗೆ ಇದ್ದ ಗೌರವದ ಕಥೆ ಹೇಳಿದರು.
ನಾನು ಮೊದಲಿಗೆ ಮುಂಬೈಗೆ ಹೋದಾಗ ಅವರಿಗೆ ದಕ್ಷಿಣ ಭಾರತ ಅಂದ್ರೆ ಮದ್ರಾಸಿಗಳು ಅಂತಷ್ಟೇ ಗೊತ್ತಿತ್ತು. ತಮಿಳರನ್ನೂ ಅವರು ಕರೆಯುತ್ತಿದ್ದುದು ಮದ್ರಾಸಿಗಳು ಅಂತಾನೆ. ತೆಲುಗು, ಕನ್ನಡದ ಬಗ್ಗೆ ಮಾಹಿತಿಯೂ ಇರಲಿಲ್ಲ. ಕೆಲವರಂತೂ ಮದ್ರಾಸ್‍ನಿಂದ ಫೋನ್ ಮಾಡಿ ಇಲ್ಲಿಂದ ಕನ್ನಡ ಎಷ್ಟು ದೂರ ಅಂತಿದ್ದರು. ಅವರಿಗೆ ಕನ್ನಡ ಮತ್ತು ಕರ್ನಾಟಕದ ವ್ಯತ್ಯಾಸವೂ ಗೊತ್ತಿರಲಿಲ್ಲ. ತೆಲುಗಿನ ಪರಿಸ್ಥಿತಿಯೂ ಭಿನ್ನವಾಗಿರಲಿಲ್ಲ. ಈಗ ಅವರೆಲ್ಲರೂ ಕನ್ನಡದ ಬಗ್ಗೆ ಕನ್ನಡ ಸಿನಿಮಾ ಕೆಜಿಎಫ್ ಬಗ್ಗೆ ಮಾತನಾಡುತ್ತಿದ್ದಾರೆ. ಗೆಲುವಿಗೆ ಇರೋ ಶಕ್ತಿಯೇ ಅದು ಎಂದು ಕೆಜಿಎಫ್ ಚಿತ್ರ, ಪ್ರಶಾಂತ್ ನೀಲ್, ಯಶ್ ಅವರನ್ನು ಹೊಗಳಿದರು ರಾಮ್ ಗೋಪಾಲ್ ವರ್ಮಾ.
ನಂತರ ಮಾತನಾಡಿದ ಸುದೀಪ್ ಕನ್ನಡ ಚಿತ್ರರಂಗವನ್ನು ಹೊಗಳಿದ ವರ್ಮಾಗೆ ಥ್ಯಾಂಕ್ಸ್ ಹೇಳುತ್ತಲೇ ಹಿಂದಿ ಅನ್ನೋದು ರಾಷ್ಟ್ರ ಭಾಷೆಯಲ್ಲ. ನಮ್ಮ ಕನ್ನಡದಂತೆಯೇ ಅದೂ ಒಂದು ಭಾಷೆ ಅಷ್ಟೆ ಎಂದರು. ಚಪ್ಪಾಳೆ ಬಿತ್ತು.
ಪ್ಯಾನ್ ಇಂಡಿಯಾ ಅನ್ನೋದು ಈಗ ಶುರುವಾಗಿದ್ದಲ್ಲ. 1970ರಿಂದಲೇ ಇದೆ. ನಾವೆಲ್ಲ ಹಿಂದಿಗೆ ಹೋಗ್ತಿಲ್ಲ. ಅಲ್ಲಿನವರೇ ಅವರ ಚಿತ್ರಗಳನ್ನು ಇಲ್ಲಿನ ಭಾಷೆಗಳಿಗೆ ಡಬ್ ಮಾಡುತ್ತಿದ್ದಾರೆ. ಹಾಗೆ ನೋಡಿದರೆ ಪ್ಯಾನ್ ಇಂಡಿಯಾ ಅನ್ನೋದು ಅಲ್ಲಿಂದಲೇ ಶುರುವಾಯ್ತು. ಈಗ ನಾವು ಮಾಡ್ತಿರೋದು ಸಿನಿಮಾ ಮಾತ್ರ. ಎಲ್ಲ ಭಾಷೆಗಳಿಗೂ ಹೋಗ್ತಿದೆ. ದೊಡ್ಡ ಮಟ್ಟದಲ್ಲಿ ಅದು ಶುರುವಾಗಿದ್ದು ಜಾಕಿ ಚಾನ್ ಚಿತ್ರಗಳಿಂದ ಎಂಬ ಕಥೆಯನ್ನೂ ಬಿಚ್ಚಿಟ್ಟರು ಸುದೀಪ್.