ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹರಿದಾಡುತ್ತಿದೆ. ಕೆಜಿಎಫ್ ಬಗ್ಗೆ ನಿಮ್ಮ ಪ್ರತಿಕ್ರಿಯೆ ಹೇಳಿ ಎಂದು ವರದಿಗಾರನೊಬ್ಬ ಸುದೀಪ್ ಅವರಲ್ಲಿ ಕೇಳುತ್ತಾನೆ. ಆಗ ಸುದೀಪ್ ನಾನು ಕೆಜಿಎಫ್ನಲ್ಲಿ ಇಲ್ಲ ಎನ್ನುತ್ತಾರೆ. ಅಷ್ಟೇ ವಿಡಿಯೋ.. ವೈರಲ್ ಆಗಿ ಹೋಯ್ತು.
ಏನಾಗುತ್ತಿದೆ ಎಂದು ಗೊತ್ತಾಗೋದರ ಒಳಗೆ ಒಂದಷ್ಟು ಯಶ್ ಫ್ಯಾನ್ಸ್ ಸುದೀಪ್ ಮೇಲೆ ಮುಗಿಬಿದ್ದರು. ಕನ್ನಡದ ಅತ್ಯಂತ ಯಶಸ್ವಿ ಚಿತ್ರದ ಬಗ್ಗೆ ಕನ್ನಡ ನಟನಾಗಿ ಒಂದೊಳ್ಳೆ ಮಾತು ಹೇಳೋಕೆ ಆಗಲ್ವಾ ಎಂದು ರೊಚ್ಚಿಗೆದ್ದರು. ಅತ್ತ ಸುದೀಪ್ ಫ್ಯಾನ್ಸ್ ಸುಮ್ಮನೆ ಕೂಡಲಿಲ್ಲ. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುವ ವೇಳೆ ಸುದೀಪ್ ಮಾಡಿದ್ದ ಟ್ವೀಟ್ನ್ನು ಹುಡುಕಿ ತೆಗೆದು ತೋರಿಸಿದರು. 2018, ನವೆಂಬರ್ 9ರಂದು ಕೆಜಿಎಫ್ ಚಾಪ್ಟರ್ 1ಗೆ ಶುಭ ಕೋರಿ ಮಾಡಿದ್ದ ಟ್ವೀಟ್. ಆ ಟ್ವೀಟ್ನಲ್ಲಿ ಕೆಜಿಎಫ್ನ್ನು ಜ್ವಾಲಾಮುಖಿಗೆ ಹೋಲಿಸಿದ್ದ ಸುದೀಪ್, ಯಶ್, ಪ್ರಶಾಂತ್ ನೀಲ್ ಹಾಗೂ ವಿಜಯ್ ಕಿರಗಂದೂರು ಅವರನ್ನು ಅಭಿನಂದಿಸಿದ್ದರು. ಆದರೆ ಈಗ ಆಗಿರೋದೇ ಬೇರೆ.
ಅಂದಹಾಗೆ ಈ ವಿಡಿಯೋ ಇತ್ತೀಚಿನದ್ದಲ್ಲ. ಇದು ಸುಮಾರು 3 ವರ್ಷಗಳ ಹಿಂದಿನ ವಿಡಿಯೋ. ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸುದೀಪ್ ನೀಡಿದ್ದ ಬೈಟ್ ಅದು. ಆಗ ಅವರಿಗೆ ಕೇಳಿದ್ದ ಪ್ರಶ್ನೆ ಕೆಜಿಎಫ್ನಲ್ಲಿ ನಿಮ್ಮ ರೋಲ್ ಏನು ಅನ್ನೋದು. ಅದು ಮುಂದುವರಿದು ಕೆಜಿಎಫ್ ಬಗ್ಗೆ ಏನು ಹೇಳ್ತೀರಿ ಅನ್ನೋ ಪ್ರಶ್ನೆಗೆ ಬಂದಿತ್ತು. ಈಗ ವೈರಲ್ ಆಗಿರೋ ವಿಡಿಯೋದಲ್ಲಿ ರೋಲ್ ಬಗ್ಗೆ ಕೇಳಿದ್ದ ಪ್ರಶ್ನೆಯನ್ನು ಎಡಿಟ್ ಮಾಡಲಾಗಿದೆಯಂತೆ. ಚಿತ್ರದಲ್ಲಿ ನಟಿಸದೇ ಇರುವವರು ರೋಲ್ ಬಗ್ಗೆ ಕೇಳಿದಾಗ ಸಹಜವಾಗಿ ಹೇಳುವ ಉತ್ತರವನ್ನೇ ಸುದೀಪ್ ಹೇಳಿದ್ದಾರೆ. ವಿವಾದ ಮಾಡಿದ್ದು ಯಾರು? ತಂದಿಟ್ಟು ತಮಾಷೆ ನೋಡಿದ್ದು ಯಾರು ಅನ್ನೋದು ಗೊತ್ತಾಗಿಲ್ಲ.
ಈಗ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ನೋಡುತ್ತಿದೆ. ಇಂತ ಹೊತ್ತಿನಲ್ಲಿ ವಿವಾದ ಬೇಡ. ಸುದೀಪ್ ಅವರು ಅದೆಷ್ಟು ಹೊಸಬರಿಗೆ ಪ್ರೋತ್ಸಾಹ ನೀಡಿದ್ದಾರೆ.. ನೀಡುತ್ತಿದ್ದಾರೆ.. ಅನ್ನೋದು ಚಿತ್ರರಂಗಕ್ಕೆ ಗೊತ್ತಿದೆ. ಸುಮ್ಮನೆ ಇಂತಹ ವಿವಾದವನ್ನು ಸೃಷ್ಟಿಸೋದು ಬೇಡ ಎಂದಿದ್ದಾರೆ ಸುದೀಪ್ ಆಪ್ತ ಸ್ನೇಹಿತ ಜಾಕ್ ಮಂಜು. ಸುದೀಪ್ ಅವರ ಮುಂಬರುವ ಚಿತ್ರ ವಿಕ್ರಾಂತ್ ರೋಣ ಚಿತ್ರದ ನಿರ್ಮಾಪಕರೂ ಅವರೇ.