ಅಕ್ಷಯ್ ಕುಮಾರ್. ಬಾಲಿವುಡ್‍ನ ಸ್ಟಾರ್ ನಟ. ವರ್ಷಕ್ಕೆ ಮೂರರಿಂದ ನಾಲ್ಕು ಚಿತ್ರಗಳನ್ನು ಕೊಡುವ ಹಾಗೂ ಆ ನಾಲ್ಕೂ ಚಿತ್ರಗಳನ್ನು ಗೆಲ್ಲುವಂತೆ ನೋಡಿಕೊಳ್ಳೋ ಏಕೈಕ ನಟ. ಅವುಗಳಲ್ಲಿ ವಿಭಿನ್ನತೆಯನ್ನೂ ಕಾಪಾಡಿಕೊಳ್ಳೋ ಅಕ್ಷಯ್ ಕುಮಾರ್ ಸಾಮಾಜಿಕ ಕಳಕಳಿಯುಳ್ಳ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರು.
ಸೈನ್ಯಾಧಿಕಾರಿಗಳ ಕಥೆ (ರುಸ್ತುಂ), ದೇಶವನ್ನು ದುರಂತದಿಂದ ಪಾರು ಮಾಡಿದವರ ಕಥೆ (ಏರ್‍ಲಿಫ್ಟ್, ), ಗೂಢಚಾರರ ಸ್ಟೋರಿಗಳು (ಸ್ಪೆಷಲ್ 26, ಬೇಬಿ, ಬೆಲ್‍ಬಾಟಂ), ಸಾಮಾಜಿಕ ಜಾಗೃತಿ ಮೂಡಿಸುವ, ಸ್ಫೂರ್ತಿಯುಕ್ತ ಕಥೆ (ಟಾಯ್ಲೆಟ್ ಏಕ್ ಪ್ರೇಮ್‍ಕಥಾ, ಪ್ಯಾಡ್‍ಮ್ಯಾನ್, ಗೋಲ್ಡ್, ಕೇಸರಿ, ಮಿಷನ್ ಮಂಗಳ್).. ಹೀಗೆ ಪಟ್ಟಿ ದೊಡ್ಡದಾಗಿಯೇ ಇದೆ. ಇದರ ನಡುವೆ ಕಮರ್ಷಿಯಲ್ ಚಿತ್ರಗಳಲ್ಲೂ ಗೆಲ್ಲುತ್ತಿದ್ದ ಅಕ್ಷಯ್ ಕುಮಾರ್ ಇತ್ತೀಚೆಗೆ ವಿವಾದಕ್ಕೆ ಗುರಿಯಾಗಿದ್ದರು.
ವಿಮಲ್ ಗುಟ್ಕಾ ಕಂಪೆನಿಯ ಜಾಹೀರಾತಿನಲ್ಲಿ ನಟಿಸಿದ್ದ ಅಕ್ಷಯ್ ಅವರನ್ನು ಅಭಿಮಾನಿಗಳೇ ತರಾಟೆಗೆ ತೆಗೆದುಕೊಂಡಿದ್ದರು. ಇದರ ಜೊತೆಗೆ 2018ರಲ್ಲಿ ಸ್ವಚ್ಛ ಭಾರತಕ್ಕಾಗಿ ಗುಟ್ಕಾ ಜಾಹೀರಾತಿನಲ್ಲಿ ನಟಿಸಲ್ಲ ಎಂದಿದ್ದ ಅಕ್ಷಯ್ ಅವರ ಹಳೆ ವಿಡಿಯೋ ಕೂಡಾ ವೈರಲ್ ಆಗಿತ್ತು. ಅಭಿಮಾನಿಗಳ ಆಕ್ರೋಶಕ್ಕೆ ಮಣಿದಿರೋ ಅಕ್ಷಯ್ ಈಗ ಕ್ಷಮೆ ಕೋರಿದ್ದಾರೆ. ಹಾಗೆಂದು ಜಾಹೀರಾತು ತಕ್ಷಣದಿಂದ ನಿಲ್ಲೋದಿಲ್ಲ. ಹಣ ಪಡೆದುಕೊಂಡಿರೊ ಕಾರಣಕ್ಕೆ ಆ ಅವಧಿ ಮುಗಿಯುವವರೆಗೆ ಜಾಹೀರಾತು ಮುಂದುವರೆಯುತ್ತೆ. ಆ ಹಣವನ್ನು ಸಾಮಾಜಿಕ ಕೆಲಸಗಳಿಗೆ ಬಳಸುತ್ತೇನೆ. ನಾನು ತಪ್ಪು ಮಾಡಿದ್ದೇನೆ. ಕ್ಷಮಿಸಿ ಎಂದಿದ್ದಾರೆ ಅಕ್ಷಯ್ ಕುಮಾರ್.
ಅಂದಹಾಗೆ ಅದೇ ಜಾಹೀರಾತಿನಲ್ಲಿ ಅಜಯ್ ದೇವಗನ್, ಶಾರೂಕ್ ಖಾನ್ ಕೂಡಾ ನಟಿಸಿದ್ದಾರೆ. ಮತ್ತೊಂದು ಕಂಪೆನಿಯ ಗುಟ್ಕಾ ಜಾಹೀರಾತಿನಲ್ಲಿ ಅಮಿತಾಭ್ ಬಚ್ಚನ್, ರಣ್‍ವೀರ್ ಸಿಂಗ್ ಕೂಡಾ ನಟಿಸಿದ್ದಾರೆ. ಅವರ್ಯಾರಿಗೂ ವ್ಯಕ್ತವಾಗದ ಆಕ್ರೋಶ ಅಕ್ಷಯ್ ಅವರಿಗಷ್ಟೇ ವ್ಯಕ್ತವಾಗಿದೆ. ಕಾರಣವೇನೆಂದು ಹುಡುಕಿದರೆ ಉತ್ತರ ಅಕ್ಷಯ್ ಅವರ ಸಿನಿಮಾಗಳಲ್ಲಿಯೇ ಇದೆ.