ಕೆಜಿಎಫ್ ಚಾಪ್ಟರ್ 2 ಇಟ್ಟ ಪ್ರತಿ ಹೆಜ್ಜೆಯೂ ದಾಖಲೆ ಬರೆಯುತ್ತಿದೆ. ಹೊಂಬಾಳೆಯ ವಿಜಯ್ ಕಿರಗಂದೂರು ಶ್ರಮಕ್ಕೆ ಪ್ರತಿಫಲವೂ ಸಿಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈಗ ಬಾಕ್ಸಾಫೀಸ್ ಡಾನ್ ಆಗಿದ್ದರೆ, ನಿರ್ದೇಶಕ ಪ್ರಶಾಂತ್ ನೀಲ್ ಈಗ ಸಿನಿಮಾ ನಿರ್ಮಾಪಕರ ಡಾರ್ಲಿಂಗ್. ಈ ಚಿತ್ರಕ್ಕೆ ಸಿಕ್ಕಿರೋ ರೆಸ್ಪಾನ್ಸ್ ಹೇಗಿದೆಯೆಂದರೆ.. ಕೆಜಿಎಫ್ 500 ಕೋಟಿ ಕ್ಲಬ್ ಸೇರಿದೆ.
ಕರ್ನಾಟಕದಲ್ಲಿ ಎಲ್ಲ ಭಾಷೆಯ ಶೋಗಳು ಹೌಸ್‍ಫುಲ್. ಕನ್ನಡಕ್ಕೆ ಹೆಚ್ಚಿನ ಥಿಯೇಟರ್ ಸಿಕ್ಕಿತ್ತು. ವೀಕೆಂಡ್ ಹೊತ್ತಿಗೆ ಬೀಸ್ಟ್‍ಗೆ ಫಿಕ್ಸ್ ಆಗಿದ್ದ ಸ್ಕ್ರೀನ್‍ಗಳೆಲ್ಲ ಕೆಜಿಎಫ್‍ಗೆ ಸಿಕ್ಕಿವೆ. ಬೆಂಗಳೂರಿನಲ್ಲೇ 80ಕ್ಕೂ ಹೆಚ್ಚು ಸ್ಕ್ರೀನ್‍ಗಳು ಸಿಕ್ಕಿವೆ.
ಅತ್ತ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಲ್ಲೂ ಬಾಕ್ಸಾಫೀಸ್ ನಂ.1 ಚಿತ್ರವಾಗಿರೋದು ಕೆಜಿಎಫ್ ಚಾಪ್ಟರ್ 2. ತಮಿಳುನಾಡಿನಲ್ಲಿ ಓಪನಿಂಗ್ ಡೇ ಮಾತು ಬಿಡಿ, 4ನೇ ದಿನವೂ ಮಿಡ್‍ನೈಟ್ ಶೋಗಳು ನಡೆದಿರೋದು ಕೆಜಿಎಫ್ ಸೃಷ್ಟಿಸಿರೋ ಸಂಚಲನಕ್ಕೆ ಸಾಕ್ಷಿ.
ಆಂಧ್ರದಲ್ಲಿ ಅಬ್ಬರ ಜೋರಾಗಿದ್ದರೂ, ಟಿಕೆಟ್ ರೇಟ್ ಬಗ್ಗೆ ಆಂಧ್ರ ಸರ್ಕಾರದ ಕಠಿಣ ನಿಲುವಿನಿಂದಾಗಿ ಬಾಕ್ಸಾಫೀಸ್‍ನಲ್ಲಿ ಹೊಸ ದಾಖಲೆ ಬರೆಯಲು ಆಗಿಲ್ಲ. ಆದರೆ ಚಿತ್ರ ನೋಡಿದವರ ಸಂಖ್ಯೆ ಅಲ್ಲಿ ಹೆಚ್ಚು.
ಅಮೆರಿಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿರೋ ಕೆಜಿಎಫ್, ಆರ್.ಆರ್.ಆರ್. ದಾಖಲೆಯನ್ನು ಮುರಿಯುವ ಎಲ್ಲ ಸುಳಿವನ್ನೂ ಕೊಟ್ಟಿದೆ.
ಮೊದಲ ದಿನ 134 ಕೋಟಿ ಕಲೆಕ್ಷನ್ ಮಾಡಿದ್ದ ಕೆಜಿಎಫ್, 2ನೇ ದಿನ 240 ಕೋಟಿ ಗಳಿಸಿತ್ತು. ಉಳಿದ ಅಧಿಕೃತ ಲೆಕ್ಕಗಳು ಸಿಕ್ಕಿಲ್ಲವಾದರೂ.. 4ನೇ ದಿನಕ್ಕೆ ವಿಶ್ವದಾದ್ಯಂತ ಬಾಕ್ಸಾಫೀಸ್ ಕಲೆಕ್ಷನ್ 500 ಕೋಟಿ ದಾಟಿರುವ ಎಲ್ಲ ಸೂಚನೆಗಳನ್ನೂ ಕೆಜಿಎಫ್ ಹವಾ ನೀಡಿದೆ.