ಪ್ರಶಾಂತ್ ನೀಲ್ ಈಗ ಸೆನ್ಸೇಷನಲ್ ಡೈರೆಕ್ಟರ್. ಇಡೀ ಇಂಡಿಯಾ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರವನ್ನು ಎದುರು ನೋಡುತ್ತಿದೆ. ಪ್ರಶಾಂತ್ ನೀಲ್ ಚಿತ್ರರಂಗಕ್ಕೆ ಹೊಸಬರೇ. ಶ್ರೀಮುರಳಿ ಅವರಿಗೆ ಭಾವ ಎನ್ನುವುದನ್ನು ಬಿಟ್ಟರೆ ಚಿತ್ರರಂಗದ ಪರಿಚಯ ಅಷ್ಟಾಗಿ ಇರಲಿಲ್ಲ. ಆದರೆ, ಅನುಭವಕ್ಕಾಗಿಯೇ ಉಗ್ರಂ ಚಿತ್ರವನ್ನು ನಿರ್ಮಿಸಿ, ನಿರ್ದೇಶಿಸಿ.. ತಾವು ಮಾಡಿದ್ದು ತಮಗೇ ಇಷ್ಟವಾಗದೆ ಮತ್ತೆ ಇಡೀ ಚಿತ್ರವನ್ನು ಹೊಸದಾಗಿ ಶೂಟ್ ಮಾಡಿ ಗೆದ್ದು ತೋರಿಸಿದವರು ಪ್ರಶಾಂತ್ ನೀಲ್. ಅಂತಹ ಪ್ರಶಾಂತ್ ನೀಲ್ ಬಗ್ಗೆ ಕನ್ನಡಿಗರ ಪ್ರಶ್ನೆಗಳು ಹತ್ತಾರಿವೆ. ಆ ಎಲ್ಲ ಪ್ರಶ್ನೆಗಳಿಗೂ ಪ್ರಶಾಂತ್ ನೀಲ್ ಹಲವು ಕಡೆ ಉತ್ತರ ಕೊಟ್ಟಿದ್ದಾರೆ.
ಪ್ರಶ್ನೆ : ಪ್ರಶಾಂತ್ ನೀಲ್ ಇನ್ನು ಮುಂದೆ ಕನ್ನಡ ಚಿತ್ರಗಳನ್ನು ಮಾಡುವುದಿಲ್ಲವಾ?
ಉತ್ತರ : ಹಾಗಿಲ್ಲ. ನಾನು ಕನ್ನಡದವನೇ. ಕೆಜೆಎಫ್ ನಂತರ ನನಗೆ ಬಂದ ಅವಕಾಶಗಳು, ಅವಕಾಶ ಕೊಟ್ಟವರು ತೋರಿಸಿದ ಪ್ರೀತಿ, ಗೌರವ ಅವುಗಳನ್ನು ಒಪ್ಪಿಕೊಳ್ಳುವಂತೆ ಮಾಡಿದೆ ಅಷ್ಟೆ. ನಾನೂ ಕೂಡಾ ವೃತ್ತಿಯಲ್ಲಿ ಮೇಲೇರಲೇಬೇಕಲ್ಲ. ಹಾಗಂತ ಕನ್ನಡ ಬಿಡಲ್ಲ. ಶ್ರೀಮುರಳಿಗೆ ಮಾತು ಕೊಟ್ಟಿದ್ದೇನೆ. ಅವರ ಸಿನಿಮಾ ಮೂಲಕ ಮತ್ತೆ ಕನ್ನಡಕ್ಕೆ ಬರುತ್ತೇನೆ.
ಪ್ರಶ್ನೆ : ಕೆಜಿಎಫ್ ಚಾಪ್ಟರ್ 2ನಲ್ಲಿ ಅನಂತ್ ನಾಗ್ ಯಾಕಿಲ್ಲ.
ಉತ್ತರ : ಹೇಳಲಾರೆ. ಅದು ಅವರ ವೈಯಕ್ತಿಕ ನಿರ್ಧಾರ. ಅವರ ನಿರ್ಧಾರವನ್ನು ಗೌರವಿಸುತ್ತೇವೆ.
ಪ್ರಶ್ನೆ : ಅನಂತ್ ನಾಗ್ ಪಾತ್ರವನ್ನು ಪ್ರಕಾಶ್ ರೈ ಹೇಗೆ ಮಾಡಿದ್ದಾರೆ?
ಉತ್ತರ : ಅನಂತ್ ಸರ್ ಮಾಡಲ್ಲ ಎಂದ ಮೇಲೆ ಸ್ಕ್ರಿಪ್ಟ್‍ನಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಪ್ರಕಾಶ್ ರೈ ಪಾತ್ರವನ್ನು ತಂದಿದ್ದೇವೆ.
ಪ್ರಶ್ನೆ : ಯಶ್ ಜೊತೆ ಮತ್ತೆ ಸಿನಿಮಾ ಮಾಡ್ತೀರಾ?
ಉತ್ತರ : ಅವರಿಗಾಗಿಯೇ ಒಂದು ಕಥೆ ಇದೆ. ಒಪ್ಪಿಕೊಂಡರೆ ಖಂಡಿತಾ ಸಿನಿಮಾ ಮಾಡ್ತೇನೆ.
ಪ್ರಶ್ನೆ : ಪ್ರಶಾಂತ್ ನೀಲ್ ಅವರಿಗೆ ಕಥೆ ಹೇಗೆ ಹೊಳೆಯುತ್ತೆ?
ಉತ್ತರ : ಎಣ್ಣೆ ಹೊಡೆಯೋವಾಗ. ಎಣ್ಣೆ ಹೊಡೆಯದಿದ್ದರೆ ನನಗೆ ತಲೆಯೇ ಓಡೋದಿಲ್ಲ. ಕೆಜಿಎಫ್ ಕಥೆ ಕೂಡಾ ಎಣ್ಣೆ ಹೊಡೆಯುವಾಗಲೇ ಹೊಳೆದ ಕಥೆ.