ಪುನೀತ್ ರಾಜಕುಮಾರ್ ಅವರ ಬಹುದೊಡ್ಡ ಕನಸುಗಳಲ್ಲಿ ಒಂದು ಯುವ ರಾಜಕುಮಾರ್. ಯುವ ಅವರನ್ನು ತಮ್ಮ ನಟಸಾರ್ವಭೌಮ ಚಿತ್ರದ ಲಾಂಚಿಂಗ್ ವೇಳೆ ದೊಡ್ಡಮಟ್ಟದಲ್ಲಿಯೇ ಪ್ರೇಕ್ಷಕರ ಮುಂದೆ ತಂದಿದ್ದರು ಅಪ್ಪು. ಅಪ್ಪು ಅವರ ಅಕಾಲಿಕ ನಿಧನದ ನಂತರ ಯುವ ಅವರಲ್ಲಿ ಅಪ್ಪು ಅವರನ್ನು ನೋಡುತ್ತಿದ್ದೇವೆ ಎಂದಿದ್ದ ಅಭಿಮಾನಿಗಳ ಸಂಖ್ಯೆ ದೊಡ್ಡದು. ಯುವ ಕೂಡಾ ಶೀಘ್ರದಲ್ಲೇ ಚಿತ್ರರಂಗಕ್ಕೆ ಬರಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಓಡಾಡುತ್ತಲೇ ಇದೆ. ಅಧಿಕೃತವಾಗಿಲ್ಲ.. ಅಷ್ಟೆ. ಈಗ ಒಂದು ಹೊಸ ಸುದ್ದಿ ಬಂದಿದೆ.
ಪುನೀತ್ ಅವರಿಗೆ ರಾಜಕುಮಾರ, ಯುವರತ್ನ ಚಿತ್ರಗಳನ್ನು ನಿರ್ದೇಶಿಸಿದ್ದ ಸಂತೋಷ್ ಆನಂದರಾಮ್, ಯುವ ರಾಜಕುಮಾರ್ ಅವರಿಗೆ ಸಿನಿಮಾ ಮಾಡುವುದು ಬಹುತೇಕ ಖಚಿತವಾಗಿದೆ. ಪುನೀತ್ ಅವರನ್ನು ಹೀರೋ ಆಗಿಯಷ್ಟೇ ಅಲ್ಲದೆ, ಕುಟುಂಬ ಸದಸ್ಯರಂತೆ ಭಾವಿಸಿದ್ದ ಹೊಂಬಾಳೆ ಸಂಸ್ಥೆಯೇ ಯುವ ಅವರನ್ನು ಲಾಂಚ್ ಮಾಡುತ್ತಿದೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ವೇಳೆ ಹೊಂಬಾಳೆ, ಇನ್ನೂ 3 ಸಿನಿಮಾ ಘೋಷಣೆ ಮಾಡಲಿದ್ದು, ಅವುಗಳಲ್ಲಿ ಒಂದು ಯುವರಾಜಕುಮಾರ್ ಅವರ ಸಿನಿಮಾ ಎನ್ನಲಾಗಿದೆ.
ಸದ್ಯಕ್ಕೆ ಸಂತೋಷ್ ಆನಂದರಾಮ್ ಜಗ್ಗೇಶ್ ಅವರೊಂದಿಗೆ ರಾಘವೇಂದ್ರ ಸ್ಟೋರ್ಸ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ವಿಜಯ್ ಕಿರಗಂದೂರು ಕೆಜಿಎಫ್ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳೆಲ್ಲ ಒಂದು ಹಂತಕ್ಕೆ ಬಂದ ಮೇಲೆ ಈ ಚಿತ್ರ ಘೋಷಣೆಯಾಗಲಿದೆ.