ಕೆಜಿಎಫ್ ಚಾಪ್ಟರ್ 2 ಪ್ರತಿದಿನವೂ ಸೆನ್ಸೇಷನ್ ಸೃಷ್ಟಿಸುತ್ತಿದೆ. ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಪ್ರಚಾರವೂ ಜೋರಾಗುತ್ತಿದೆ. ಏಕೆಂದರೆ ರಾಕಿಂಗ್ ಸ್ಟಾರ್ ಯಶ್-ಪ್ರಶಾಂತ್ ನೀಲ್-ಹೊಂಬಾಳೆ-ವಿಜಯ್ ಕಿರಗಂದೂರು ಸೃಷ್ಟಿಸಿರೋ ನಿರೀಕ್ಷೆಯ ಸುನಾಮಿ. ಹೌದು.. ನಿರೀಕ್ಷೆಯೂ ಸುನಾಮಿಯಂತೆಯೇ ಇದೆ. ಸಂಜಯ್ ದತ್, ರವೀನಾ ಟಂಡನ್ ಮತ್ತು ಪ್ರಕಾಶ್ ರೈ ಸೇರ್ಪಡೆಯಿಂದ ನಿರೀಕ್ಷೆ ಇನ್ನಷ್ಟು ಜೋರಾಗಿದೆ.
ಒಂದು ಕಡೆ ಏಪ್ರಿಲ್ 14ಕ್ಕೆ ರಿಲೀಸ್ ಡೇಟ್ ಘೋಷಿಸಿರುವ ಕೆಜಿಎಫ್ ಚಾಪ್ಟರ್ 2, ಇನ್ನೊಂದೆಡೆ ಸೆನ್ಸಾರ್ ಪ್ರಕ್ರಿಯೆಯನ್ನೂ ಮುಗಿಸಿದೆ. ಚಿತ್ರದ ಲೆಂಗ್ತ್ ಇರೋದು 168.06 ನಿಮಿಷ. ಅಂದರೆ 2 ಗಂಟೆ 48 ನಿಮಿಷ. ಚಿತ್ರಕ್ಕೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ.
ಮತ್ತೊಂದೆಡೆ ರಾಕಿಂಗ್ ಟೀಂ ಪ್ರಚಾರದ ಅಭಿಯಾನ ಆರಂಭಿಸಿದೆ. ಚಾರ್ಟಡ್ ಫ್ಲೈಟ್‍ನಲ್ಲಿ ಯಶ್ ನೇತೃತ್ವದಲ್ಲಿ ಇಡೀ ತಂಡ ಹೊರಟಿದೆ. ಮೊದಲಿಗೆ ದೆಹಲಿಯಿಂದಲೇ ಪ್ರಚಾರ ಶುರುವಾಗಲಿದೆ.
ಇದರ ಜೊತೆಯಲ್ಲಿಯೇ ಏಪ್ರಿಲ್ 8ರಿಂದ ಕೆಜಿಎಫ್ ಚಾಪ್ಟರ್ 1 ರೀ ರಿಲೀಸ್ ಆಗಲಿದೆ. ಏಪ್ರಿಲ್ 13ರವರೆಗೂ ಥಿಯೇಟರುಗಳಲ್ಲಿ ಚಾಪ್ಟರ್ 1 ಇರಲಿದೆ. ಚಾಪ್ಟರ್ 2 ಮತ್ತು 1 ಮಧ್ಯೆ 3 ವರ್ಷಗಳಿಗಿಂತ ಹೆಚ್ಚಿನ ಗ್ಯಾಪ್ ಬಂದ ಕಾರಣ ಈ ಹೆಜ್ಜೆಯಿಟ್ಟಿದ್ದಾರೆ ವಿಜಯ್ ಕಿರಗಂದೂರು. ಚಾಪ್ಟರ್ 2 ನೋಡುವವರಿಗೆ ಚಾಪ್ಟರ್ 1ನ ಕಥೆ ಗೊತ್ತಿರಬೇಕು. ಇಲ್ಲದಿದ್ದರೆ ಕಷ್ಟ ಎಂಬ ಕಾರಣಕ್ಕೆ ಈ ನಡೆ. ಅಂದಹಾಗೆ ಇದೂ ಕೂಡಾ ದಾಖಲೆಯೇ. 2ನೇ ಭಾಗ ನೋಡೋಕೆ ಮೊದಲು ಮೊದಲ ಭಾಗ ರಿಲೀಸ್ ಮಾಡಿದ ದಾಖಲೆಯೂ ಈಗ ಕೆಜಿಎಫ್‍ನದ್ದೇ.