` ಬಂಗಾರದ ಮನುಷ್ಯನ ಬಂಗಾರದ ವರ್ಷದ ಬಂಗಾರದಂತಾ ದಾಖಲೆಗಳು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ಬಂಗಾರದ ಮನುಷ್ಯನ ಬಂಗಾರದ ವರ್ಷದ ಬಂಗಾರದಂತಾ ದಾಖಲೆಗಳು..!
Bangaradha Manshya Movie Image

ಬಂಗಾರದ ಮನುಷ್ಯ. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮರೆಯಲಾಗದ ಸಿನಿಮಾ. ಈ ಚಿತ್ರಕ್ಕೀಗ 50 ವರ್ಷ. ಮಾರ್ಚ್‍ನಲ್ಲಿ ರಿಲೀಸ್ ಆಗಿದ್ದ ಚಿತ್ರಕ್ಕೀಗ 50 ವರ್ಷ. 1972ರ ಮಾರ್ಚ್ 31ರಂದು ಸಿನಿಮಾ ರಿಲೀಸ್ ಆಗಿತ್ತು. 50 ವರ್ಷ ತುಂಬಿರುವ ಈ ಶುಭ ಸಂದರ್ಭದಲ್ಲಿ ಚಿತ್ರ ಸೃಷ್ಟಿಸಿದ ದಾಖಲೆ, ಸ್ವಾರಸ್ಯಗಳನ್ನು ನೆನಪಿಸಿಕೊಳ್ಳದೇ ಹೋದರೆ ಹೇಗೆ?

1. ಡಾ.ರಾಜಕುಮಾರ್, ಭಾರತಿ, ಆರತಿ, ಶ್ರೀನಾಥ್, ವಜ್ರಮುನಿ, ಅದವಾನಿ ಲಕ್ಷ್ಮಿದೇವಿ, ಲೋಕನಾಥ್, ದ್ವಾರಕೀಶ್, ಬಾಲಕೃಷ್ಣ ನಟಿಸಿದ್ದರು.

2. ಸಿದ್ಧಲಿಂಗಯ್ಯ ಚಿತ್ರದ ನಿರ್ದೇಶಕರು. ಆರ್.ಲಕ್ಷ್ಮಣ್ ಮತ್ತು ಗೋಪಾಲ್ ಚಿತ್ರದ ನಿರ್ಮಾಪಕರು. ಚಿತ್ರದ ಅವಧಿ 174 ನಿಮಿಷಗಳಿತ್ತು.

3. ಸಿನಿಮಾ ಬಿಡುಗಡೆಯಾದ ನಂತರ ನೂರಾರು ರೈತರು ನಗರ ಬಿಟ್ಟು ಹಳ್ಳಿಗಳಿಗೆ ವಾಪಸ್ ಹೋಗಿ ರೈತರಾಗಿ ದುಡಿಮೆ ಮಾಡಿದರು. ಹೊಸ ಜೀವನ ಕಟ್ಟಿಕೊಂಡರು. ಆಧುನಿಕ ಕೃಷಿಯತ್ತ ಜನರನ್ನು ಸೂಜಿಗಲ್ಲಿನಂತೆ ಸೆಳೆದ ಸಿನಿಮಾ ಬಂಗಾರದ ಮನುಷ್ಯ.

4. ಬೆಂಗಳೂರಿನ ಸ್ಟೇಟ್ಸ್‍ನಲ್ಲಿ (ಈಗಿನ ಭೂಮಿಕಾ ಥಿಯೇಟರ್) ಸತತ 2 ವರ್ಷ ಪ್ರದರ್ಶನ ಕಂಡ ಸಿನಿಮಾ ಬಂಗಾರದ ಮನುಷ್ಯ. ಮೈಸೂರಿನ ಚಾಮುಂಡೇಶ್ವರಿಯಲ್ಲಿ ಸತತ 60 ವಾರ ಪ್ರದರ್ಶನ. ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳ ಪ್ರಮುಖ ಚಿತ್ರಮಂದಿರಗಳಲ್ಲಿ ಕನಿಷ್ಠ 25 ವಾರ ಓಡಿದ ಸಿನಿಮಾ ಬಂಗಾರ ಮನುಷ್ಯ.

5. 1988ರಲ್ಲಿ ರೀ ರಿಲೀಸ್ ಆಯ್ತು. ಆಗ ಕೂಡಾ 25 ವಾರ ಪ್ರದರ್ಶನ ಕಂಡು ದಾಖಲೆ ಬರೆದ ಚಿತ್ರ ಬಂಗಾರದ ಮನುಷ್ಯ.

6. ನಾಯಕ ಸೋಲುವುದನ್ನು ಜನ ಒಪ್ಪುವುದಿಲ್ಲ. ನಿರ್ಮಾಪಕರಿಗೆ ಲಾಸ್ ಆಗಬಾರದು. ಕ್ಲೈಮಾಕ್ಸ್ ಬದಲಿಸೋಕೆ ಸಾಧ್ಯವೇ ಎಂದು ನಿರ್ದೇಶಕರನ್ನು ಕೇಳಿದ್ದರಂತೆ ಡಾ.ರಾಜ್. ಸಿದ್ದಲಿಂಗಯ್ಯನವರು ರಾಜ್ ಮತ್ತು ನಿರ್ಮಾಪಕರ ಮನವೊಲಿಸಿದ್ದರಂತೆ.

7. ಚಿತ್ರ ಬಿಡುಗಡೆಯಾದ ಮೊದಲ ವಾರ ಥಿಯೇಟರಿಗೆ ಜನ ಬರಲೇ ಇಲ್ಲ. ಆರಂಭದ ವಾರದ ಶೋಗಳು ಖಾಲಿ ಹೊಡೆದಿದ್ದವು. 2 ವಾರದ ನಂತರ ಹೌಸ್‍ಫುಲ್ ಕಂಡಿದ್ದ ಸಿನಿಮಾ.

8. ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶಕ. ಚಿತ್ರದಲ್ಲಿ 5 ಹಾಡುಗಳಿದ್ದು, ಎಲ್ಲ ಹಾಡುಗಳೂ ಸೂಪರ್ ಹಿಟ್. ಆಗದು ಕೈಕಟ್ಟಿ ಕುಳಿತರೆ.. ಇವತ್ತಿಗೂ ಸೋತು ಕುಳಿತವರಿಗೆ ಸ್ಫೂರ್ತಿ ತುಂಬುವ ಹಾಡಾಗಿದೆ.

9. 2013ರಲ್ಲಿ ಫೋಬ್ರ್ಸ್ ಪಟ್ಟಿ ಮಾಡಿದ 25 ಭಾರತೀಯ ಸಿನಿಮಾಗಳಲ್ಲಿ ಬಂಗಾರದ ಮನುಷ್ಯ ಚಿತ್ರ ಸ್ಥಾನ ಪಡೆದಿತ್ತು.

10. ಬಂಗಾರದ ಮನುಷ್ಯ ಚಿತ್ರ ತೆಲುಗಿಗೆ ರೀಮೇಕ್ ಆಗಿತ್ತು. ಕೃಷ್ಣ, ರಾಜ್ ಮಾಡಿದ್ದ ಪಾತ್ರ ಮಾಡಿದ್ದರು. ದೇವುಡುಲಾಂಟಿ ಮನಿಷಿ ಅನ್ನೋದು ತೆಲುಗು ಚಿತ್ರದ ಟೈಟಲ್.

11. ಬಂಗಾರದ ಮನುಷ್ಯ ಚಿತ್ರದ ನಂತರ ಸಾವಿರಾರು ಜನ ತಮ್ಮ ಮಕ್ಕಳಿಗೆ ರಾಜೀವ್ ಎಂದು ನಾಮಕರಣ ಮಾಡಿದರು. ಚಿತ್ರದಲ್ಲಿ ರಾಜೀವಪ್ಪನ ಪಾತ್ರ ಮಾಡಿದ ಪ್ರಭಾವ ಹಾಗಿತ್ತು.

12. ಚಿತ್ರದ ಸಂಪೂರ್ಣ ಚಿತ್ರೀಕರಣ ನಡೆದಿದ್ದು ಚಿಕ್ಕಮಗಳೂರಿನ ಕಳಸಾಪುರದಲ್ಲಿ..

13.ಆಗಿನ ಕಾಲಕ್ಕೆ ಚಿತ್ರದ ಬಜೆಟ್ 12 ಲಕ್ಷವಂತೆ. ಚಿತ್ರದ ಒಟ್ಟಾರೆ ಕಲೆಕ್ಷನ್ ಆಗಿನ ಕಾಲಕ್ಕೆ ಎರಡೂವರೆ ಕೋಟಿ ಎನ್ನುವ ಅಂದಾಜಿದೆ.

14. ಸ್ಟೇಟ್ಟ್ ಚಿತ್ರಮಂದಿರದಲ್ಲಿ ಪ್ರದರ್ಶನ ಒಂದು ವರ್ಷ ಪೂರೈಸಿದಾಗ ಬಂಗಾರದ ಮನುಷ್ಯ ತೆಗೆದು ಇನ್ನೊಂದು ಚಿತ್ರ ಹಾಕುವುದಕ್ಕೆ ಚಿತ್ರಮಂದಿರದವರು ಮುಂದಾದರು. ಅಭಿಮಾನಿಗಳಿಂದ ದೊಡ್ಡ ಪ್ರತಿಭಟನೆಯೇ ನಡೆದು ಹೋಯ್ತು. ಹಿಂಸಾಚಾರವೂ ಆಯಿತು. ಆಗ ಶಾಸಕರಾಗಿದ್ದ ಮಾಜಿ ಸಿಎಂ ಬಂಗಾರಪ್ಪ ಸಂಧಾನ ನಡೆಸಿ ಚಿತ್ರವನ್ನು ಥಿಯೇಟರಿನಲ್ಲಿ ಮುಂದುವರೆಸಿದರು.

15.ಚಿತ್ರದ ಬಗ್ಗೆ ಟೀಕೆಗಳೂ ಇದ್ದವು. ಜ್ಞಾನಪೀಠ ಪುರಸ್ಕøತ ಸಾಹಿತಿ ಅನಂತ ಮೂರ್ತಿ `ಈ ಚಿತ್ರ ನೋಡಿದವರು ನಾವೂ ಕೂಡಾ ರಾಜೀವಪ್ಪನಂತೆ ರಾತ್ರೋರಾತ್ರಿ ಶ್ರೀಮಂತರಾಗುವ ಭ್ರಮೆಗೆ ಬೀಳುತ್ತಾರೆ' ಎಂದಿದ್ದರೆ, ಇನ್ನೊಬ್ಬ ಸಾಹಿತಿ ಅಲನಹಳ್ಳಿ ಕೃಷ್ಣ `ಚಿತ್ರದ ಆರಂಭದಲ್ಲಿ ನಾಯಕನ ಚಪ್ಪಲಿ  ತೋರಿಸುತ್ತಾರೆ. ಇದು ವ್ಯಕ್ತಿಪೂಜೆಯನ್ನು ಬಿಂಬಿಸುವ ಯತ್ನ' ಎಂದಿದ್ದರು.

16. ಬಂಗಾರದ ಮನುಷ್ಯ ಚಿತ್ರಕ್ಕೆ ಒಟ್ಟು 5 ರಾಜ್ಯ ಪ್ರಶಸ್ತಿಗಳು ಸಿಕ್ಕವು. ಆದರೆ, ಡಾ.ರಾಜ್ ಕುಮಾರ್ ಅವರಿಗೆ ಶ್ರೇಷ್ಟ ನಟ ಪ್ರಶಸ್ತಿ ಸಿಗಲಿಲ್ಲ.

17.ಈ ಸಿನಿಮಾದ ಕಥೆ ಕಾದಂಬರಿಕಾರ ಟಿ.ಕೆ.ರಾಮರಾವ್ ಅವರದ್ದು. ವಿಶೇಷವೆಂದರೆ ಕ್ರೈಂ ಥ್ರಿಲ್ಲರ್ ಕಾದಂಬರಿಗಳಿಗೆ ಹೆಸರುವಾಸಿಯಾಗಿದ್ದ ಟಿ.ಕೆ.ರಾಮರಾವ್ ಅವರು ಬರೆದಿರೋ ಕೆಲವೇ ಸಾಮಾಜಿಕ ಕಾದಂಬರಿಗಳಲ್ಲಿ ಒಂದು ಬಂಗಾರದ ಮನುಷ್ಯ.

18. ಬಂಗಾರದ ಮನುಷ್ಯ. ನಿರ್ದೇಶಕ ಸಿದ್ದಲಿಂಗಯ್ಯ ಮತ್ತು ಡಾ.ರಾಜ್ ಕಾಂಬಿನೇಷನ್ನಿನ ಸತತ 6ನೇ ಸಿನಿಮಾ. ಸಿದ್ದಲಿಂಗಯ್ಯ ಮೊದಲು ನಿರ್ದೇಶಕರಾಗಿದ್ದು ಡಾ.ರಾಜ್ ಅವರ ಮೇಯರ್ ಮುತ್ತಣ್ಣ ಚಿತ್ರದಿಂದ. ಮೇಯರ್ ಮುತ್ತಣ್ಣ, ಬಾಳು ಬೆಳಗಿತು, ನಮ್ಮ ಸಂಸಾರ, ತಾಯಿ ದೇವರು, ನ್ಯಾಯವೇ ದೇವರು ನಂತರ ಬಂದ ಚಿತ್ರವೇ ಬಂಗಾರದ ಮನುಷ್ಯ. ಆನಂತರ ದೂರದ ಬೆಟ್ಟ. ಎಲ್ಲ ಚಿತ್ರಗಳೂ ಸೂಪರ್ ಹಿಟ್.

19. ಅಂದಹಾಗೆ ಚಿತ್ರದ ನಿರ್ಮಾಪಕ ಆರ್.ಕೆ.ಲಕ್ಷ್ಮಣ್ ಯಾರು ಗೊತ್ತೇ? ಸಂಗೊಳ್ಳಿ ರಾಯಣ್ಣ, ಕುರುಕ್ಷೇತ್ರದಂತಾ ಚಿತ್ರಗಳನ್ನು ನಿರ್ದೇಶಿಸಿರುವ ನಾಗಣ್ಣ ಅವರ ತಂದೆ. ತಮ್ಮ ತಂದೆಗೆ ಈ ಕಾದಂಬರಿ ತಂದುಕೊಟ್ಟು, ಒಳ್ಳೆಯ ಸಿನಿಮಾ ಆಗುತ್ತೆ ಎಂದು ಹೇಳಿದ್ದವರೇ ನಾಗಣ್ಣ.

20. ಬಂಗಾರದ ಮನುಷ್ಯ ಕನ್ನಡ ಚಿತ್ರರಂಗದ ನಂ.1 ಕ್ಲಾಸ್ ಸಿನಿಮಾ. ಆಗಿನ ಕಾಲಕ್ಕೆ ಚಿತ್ರದ ಬಜೆಟ್ 12 ಲಕ್ಷ ಎಂದರೆ ಈಗಿನ ಲೆಕ್ಕದಲ್ಲಿ 25 ಕೋಟಿ ಎಂದುಕೊಳ್ಳಬಹುದು. ಕಲೆಕ್ಷನ್ ಎರಡೂವರೆ ಕೋಟಿ ಎಂದರೆ.. ಈಗಿನ ಲೆಕ್ಕ.. ಲೆಕ್ಕಾಚಾರ ನಿಮಗೇ ಬಿಟ್ಟಿದ್ದು...!!!!