ಪುನೀತ್ ರಾಜಕುಮಾರ್ ರಾಜ್ಯದ ಲಕ್ಷಾಂತರ ಅಭಿಮಾನಿಗಳ ಪಾಲಿಗೆ ಪ್ರೀತಿಯ ನಟ. ಆದರೆ ಅವರ ಕುಟುಂಬದವರಿಗೆ ಪುನೀತ್ ಬೇರೆಯೇ. ಅಭಿಮಾನಿಗಳೇ ಇನ್ನೂ ದುಃಖದಿಂದ ಹೊರಬರದಿರುವಾಗ, ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಇದನ್ನು ನಿರೀಕ್ಷಿಸಲಾಗದು. ಹಾಗೆ ನೋಡಿದರೆ ಅತ್ಯಂತ ಸಂಯಮ ಪಾಲಿಸುತ್ತಿರುವ ಅಶ್ವಿನಿ ಹೊರಗೆ ಎಲ್ಲಿಯೂ ತಮ್ಮ ದುಃಖ ತೋಡಿಕೊಳ್ಳುತ್ತಿಲ್ಲ.
ಅಪ್ಪು ಅವರನ್ನು ಮರೆಯಲು ಆಗುತ್ತಿಲ್ಲ. ಅವರು ಹೋದ ನಂತರ ನಮ್ಮ ದುಃಖದಲ್ಲಿ ಇಡೀ ಕರುನಾಡು ನಿಂತಿತ್ತು. ಅವರ ಅಭಿಮಾನಿಗಳದ್ದಂತೂ ಮೇರೆ ಮೀರಿದ ಅಭಿಮಾನ. ಅವರು ನಡೆಸಿದ ರಕ್ತದಾನ, ಅನ್ನದಾನ, ನೇತ್ರದಾನ.. ಒಂದಾ ಎರಡಾ.. ನನಗೆ ಮಾತೇ ಬರುತ್ತಿಲ್ಲ. ಮನಸ್ಸು ತುಂಬಿ ಬಂದಿದೆ. ಅವರಿಗೆಲ್ಲ ನಾನು ಕೃತಜ್ಞಳಾಗಿದ್ದೇನೆ. ಅವರ ಅಗಲಿಕೆಯ ದುಃಖದಿಂದ ನಾನಿನ್ನೂ ಹೊರಬಂದಿಲ್ಲ. ಹಾಗಾಗಿ ಯಾವುದೇ ಸಂಭ್ರಮ ಸ್ವೀಕರಿಸುತ್ತಿಲ್ಲ. ನನಗೆ ಚಿತ್ರರಂಗ ಹೊಸದಲ್ಲ. ಅವರು ಹಾಕಿಕೊಟ್ಟ ಹೆಜ್ಜೆಯಲ್ಲಿ ಮುನ್ನಡೆಯುತ್ತೇನೆ. ಹೊಸಬರಿಗೆ ಅವಕಾಶ ನೀಡುತ್ತೇವೆ. ಅಪ್ಪು ಕನಸನ್ನು ಈಡೇರಿಸುತ್ತೇವೆ.
ಜೇಮ್ಸ್ ಚಿತ್ರ ಚೆನ್ನಾಗಿ ಬಂದಿದೆ ಎಂದು ಎಲ್ಲರೂ ಹೇಳಿದ್ದಾರೆ. ನಾನು ನೋಡಿಲ್ಲ. ಮಕ್ಕಳೂ ಸೇರಿದಂತೆ ನಮ್ಮ ಕುಟುಂಬದವರೆಲ್ಲ ಚಿತ್ರ ನೋಡುತ್ತಾರೆ. ನನಗೆ ನೋಡಲು ಆಗುತ್ತಿಲ್ಲ. ಅಭಿಮಾನಿಗಳಿಗೆ ಒಳ್ಳೆಯದಾಗಲಿ, ಚಿತ್ರತಂಡಕ್ಕೆ ಒಳ್ಳೆಯದಾಗಲಿ. ಅಪ್ಪು ಹಾರೈಕೆ ನಮ್ಮೆಲ್ಲರ ಮೇಲಿರಲಿ ಎಂದಿದ್ದಾರೆ ಅಶ್ವಿನಿ ಪುನೀತ್ ರಾಜಕುಮಾರ್.