ಮಾಜಿ ಸಿಎಂ ಯಡಿಯೂರಪ್ಪ ಬಣ್ಣ ಹಚ್ಚಿದ್ದಾರೆ. ಚಿತ್ರದ ಹೆಸರು ತನುಜಾ. ಚಿತ್ರದಲ್ಲಿ ಅವರ ಪಾತ್ರದ ಹೆಸರು ಬಿ.ಎಸ್.ಯಡಿಯೂರಪ್ಪ. ಮುಖ್ಯಮಂತ್ರಿ. ಯೆಸ್, ಇದು ನೈಜ ಕಥೆಯ ಚಿತ್ರ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಒಂದು ಘಟನೆ ನಡೆದಿತ್ತು. ತನುಜಾ ಎನ್ನುವ ವಿದ್ಯಾರ್ಥಿನಿಯೊಬ್ಬರು ನೀಟ್ ಪರೀಕ್ಷೆ ಬರೆಯೋಕೆ ಬರಬೇಕಿತ್ತು. ಅದು ಕೋವಿಡ್ ಸಮಯ. ಆದರೆ, ಟ್ರಾವೆಲಿಂಗ್ ಮಾಡೋಕೆ ಸಾಧ್ಯವಾಗದೆ ಪರದಾಡುತ್ತಿದ್ದ ವಿದ್ಯಾರ್ಥಿನಿಯ ನೆರವಿಗೆ ವಿಶ್ವವಾಣಿ ಸಂಪಾದಕ ವಿಶೇಶ್ವರ ಭಟ್ ಬಂದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅದು ಸಂಚಲನವನ್ನೇ ಸೃಷ್ಟಿಸಿತ್ತು. ನೀಟ್ ಮುಖ್ಯಸ್ಥ ಪ್ರದೀಪ್ ಈಶ್ವರ್ ಹಾಗೂ ಖುದ್ದು ಆಗ ಸಿಎಂ ಆಗಿದ್ದ ಯಡಿಯೂರಪ್ಪ ವಿಶೇಷ ಗಮನ ಹರಿಸಿದ ಕಾರಣ ತನುಜಾ ಪರೀಕ್ಷೆ ಬರೆದಿದ್ದರು. ಒಳ್ಳೆಯ ಅಂಕವನ್ನೂ ಗಳಿಸಿ ಗೆದ್ದರು. ಈಗ ಆ ಕಥೆಯೇ ಸಿನಿಮಾ ಆಗುತ್ತಿದೆ.
ರಾಜ್ಯ ಪ್ರಶಸ್ತಿ ಪುರಸ್ಕøತ ನಿರ್ದೇಶಕ ಹರೀಶ್ ಎಂ.ಡಿ.ಹಳ್ಳಿ ತನುಜಾ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದು ಆ ಚಿತ್ರಕ್ಕಾಗಿ ಈಗ ಖುದ್ದು ಯಡಿಯೂರಪ್ಪ ಬಣ್ಣ ಹಚ್ಚಿದ್ದಾರೆ. ಸ್ಯಾಂಡಲ್‍ವುಡ್‍ಗೆ ಕಾಲಿಟ್ಟಿದ್ದಾರೆ.
ಈ ಚಿತ್ರಕ್ಕೆ ಸುಂಡಹಳ್ಳಿ ಸೋಮಶೇಖರ, ಚಂದ್ರಶೇಖರ್ ಗೌಡ ನಿರ್ಮಾಪಕರಾಗಿದ್ದಾರೆ. ಅನಿಲ್ ಷಡಕ್ಷರಿ, ಪ್ರಕಾಶ್ ಸಹ ನಿರ್ಮಾಪಕರು. ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಪಲ್ಲವಿ ಪಾತ್ರದಲ್ಲಿ ಮಿಂಚು ಹರಿಸಿದ್ದ ಸಪ್ತಾ ಪಾವೂರು, ತನುಜಾ ಪಾತ್ರದಲ್ಲಿ ನಟಿಸಿದ್ದಾರೆ. ಬಿಎಸ್‍ವೈ ಅವರೊಂದಿಗೆ ವಿಶ್ವೇಶ್ವರ ಭಟ್, ಸಚಿವ ಡಾ.ಕೆ.ಸುಧಾಕರ್ ಕೂಡಾ ತಮ್ಮ ತಮ್ಮ ಪಾತ್ರದಲ್ಲೇ ನಟಿಸಿದ್ದಾರೆ.