ಕೊರೊನಾ 3ನೇ ಅಲೆಯೂ ಅಂತ್ಯವಾಗುತ್ತಿರುವ ಹೊತ್ತಿಗೆ ತಡೆದ ಮಳೆ ಜಡಿದು ಬಂತು ಅನ್ನೋ ಹಾಗೆ ಸಿನಿಮಾಗಳ ಸುಗ್ಗಿ ಶುರುವಾಗುತ್ತಿದೆ. ಡಿಸೆಂಬರ್ ಕೊನೆಯವರೆಗೆ ಸಿನಿಮಾಗಳ ರಿಲೀಸ್ ಹಬ್ಬ ಜೋರಾಗಿತ್ತು. ಯಾವಾಗ ಡಿಸೆಂಬರ್ ಕೊನೆಯ ಹೊತ್ತಿಗೆ ಮತ್ತೊಮ್ಮೆ ಲಾಕ್ ಡೌನ್ ಭಯ ಶುರುವಾಯ್ತೋ.. ಎಲ್ಲರೂ ಸೈಲೆಂಟ್ ಆಗಿಬಿಟ್ಟರು. ಈಗ ಫೆಬ್ರವರಿ ಶುರುವಾಗೋ ಹೊತ್ತಿಗೆ ಭಯ ಹೋಗುತ್ತಿದೆ. ಸುಗ್ಗಿ ಶುರುವಾಗಿದೆ.
ಕನ್ನಡದಲ್ಲಿ ವಿಕ್ರಾಂತ್ ರೋಣ ರಿಲೀಸ್ ಮುಂದಕ್ಕೆ ಹೋಗಿದ್ದರೂ ಏಪ್ರಿಲ್ ನಂತರ ರಿಲೀಸ್ ಡೇಟ್ ಘೋಷಣೆಯಾಗಬಹುದು.
ಮಾರ್ಚ್ 17ಕ್ಕೆ ಪುನೀತ್ ಹುಟ್ಟುಹಬ್ಬ. ಆ ದಿನವೇ ಜೇಮ್ಸ್ ರಿಲೀಸ್ ಮಾಡೋಕೆ ಚಿತ್ರತಂಡ ಹಗಲೂ ರಾತ್ರಿ ಶ್ರಮಿಸುತ್ತಿದೆ. ಏಪ್ರಿಲ್ 14ಕ್ಕೆ ಕೆಜಿಎಫ್ ಚಾಪ್ಟರ್ 2 ರಿಲೀಸ್ ಇದೆ.
ಅತ್ತ ತೆಲುಗಿಗೆ ಹೋದರೆ ಆರ್.ಆರ್.ಆರ್. ಮಾರ್ಚ್ 25ಕ್ಕೆ ರಿಲೀಸ್ ಡೇಟ್ ಘೋಷಿಸಿದೆ. ಸ್ಸೋ.. ಜೇಮ್ಸ್ ಚಿತ್ರಕ್ಕೆ ಎದುರಾಳಿಯಾಗಿ ಬರುತ್ತಿಲ್ಲ. ಮಾರ್ಚ್ 11ಕ್ಕೆ ಪ್ರಭಾಸ್ ನಟನೆಯ ರಾಧೇ ಶ್ಯಾಂ ಇದೆ. ಏಪ್ರಿಲ್ 1ಕ್ಕೆ ಪವನ್ ಕಲ್ಯಾಣ್ ನಟಿಸಿರೋ ಭೀಮ್ಲಾ ನಾಯಕ್ ಬರುತ್ತಿದೆ. ಮಹೇಶ್ ಬಾಬು ನಟನೆಯ ಸರ್ಕಾರಿ ವಾರು ಪಾಟ ಕೂಡಾ ಮೇ ತಿಂಗಳ ರೇಸ್‍ನಲ್ಲಿದೆ. ಇದರ ಮಧ್ಯೆ ಚಿರಂಜೀವಿ ನಟಿಸಿರೋ ಆಚಾರ್ಯ ರಿಲೀಸ್ ಡೇಟ್ ಅನೌನ್ಸ್ ಆಗಬಹುದು.
ಅತ್ತ ತಮಿಳಿಗೆ ಹೋದರೆ ಅಜಿತ್ ನಟನೆಯ ವಲಿಮೈ, ಆರ್.ಆರ್.ಆರ್.ಗೆ ಮೊದಲು ಫೆಬ್ರವರಿ 24ಕ್ಕೇ ಬರುತ್ತಿದೆ. ವಿಜಯ್ ನಟಿಸಿರೋ ಬೀಸ್ಟ್ ಕೆಜಿಎಫ್ ಚಾಪ್ಟರ್ 2ಗೆ ಫೈಟ್ ಕೊಡಬಹುದು. ಅಂದಹಾಗೆ ಕೆಜಿಎಫ್ ಚಾಪ್ಟರ್ 2, ಹಿಂದಿಯಲ್ಲಿ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಈಗಾಗಲೇ ಫೈಟ್ ಕೊಡೋದು ಅಧಿಕೃತವಾಗಿದೆ.
ಕನ್ನಡದಲ್ಲಿ ಸದ್ಯಕ್ಕೆ ಫೆಬ್ರವರಿ 25ಕ್ಕೆ ರಿಲೀಸ್ ಡೇಟ್ ಅನೌನ್ಸ್ ಮಾಡಿರೋದು ಓಲ್ಡ್ ಮಾಂಕ್ ಮಾತ್ರ. ಇನ್ನುಳಿದಂತೆ ತೋತಾಪುರಿ, ಏಕ್ ಲವ್ ಯಾ ಸೇರಿದಂತೆ ಹಲವು ಚಿತ್ರಗಳು ರೇಸ್‍ನಲ್ಲಿವೆ. ಒಟ್ಟಿನಲ್ಲಿ ಸುಗ್ಗಿ ಶುರುವಾಗಿದೆ.