ಜೇಮ್ಸ್ ಚಿತ್ರದ ಚಿತ್ರೀಕರಣ ಮುಗಿಯುವ ಮೊದಲೇ ವಿಧಿ ಆಘಾತ ನೀಡಿತ್ತು. ಅಪ್ಪು ದೂರವಾದರು. ಈಗ ಜೇಮ್ಸ್ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಎಲ್ಲರಲ್ಲಿಯೂ ಕಾಡುತ್ತಿರುವುದು ಒಂದೇ ಪ್ರಶ್ನೆ. ಪುನೀತ್ ಪಾತ್ರಕ್ಕೆ ಡಬ್ ಮಾಡುವವರು ಯಾರು?
ಶಿವಣ್ಣ ನಾನು ರೆಡಿ ಎಂದರಾದರೂ ಶಿವಣ್ಣ ಧ್ವನಿ ಪುನೀತ್ ಧ್ವನಿಗೆ ಹೊಂದುವುದಿಲ್ಲ. ನಿರ್ಮಾಪಕರು ಮತ್ತು ನಿರ್ದೇಶಕರು ಹಲವಾರು ಮಿಮಿಕ್ರಿ ಆರ್ಟಿಸ್ಟ್ಗಳ ಧ್ವನಿಯನ್ನೂ ಟ್ರೈ ಮಾಡಿದ್ದಾರೆ.
ಎರಡು ಮೂರು ನಿಮಿಷ ಪುನೀತ್ ಧ್ವನಿ ಅನುಕರಣೆ ಮಾಡೋದೇ ಬೇರೆ. ಎರಡೂವರೆ ಗಂಟೆಯ ಸಿನಿಮಾಗೆ ಪುನೀತ್ ಧ್ವನಿ ಕೂರಿಸೋದೇ ಬೇರೆ. ಅದು ಅಸಾಧ್ಯ ಎನ್ನುತ್ತಾರೆ ನಿರ್ಮಾಪಕ ಕಿಶೋರ್.
ಶೂಟಿಂಗ್ ವೇಳೆ ರೆಕಾರ್ಡ್ ಆಗಿರುವ ಪುನೀತ್ ಅವರ ಧ್ವನಿಯನ್ನೇ ಸಿನಿಮಾದಲ್ಲಿ ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ರೆಕಾರ್ಡ್ ಆಗಿರುವ ವಾಯ್ಸ್ನ್ನೇ ಹಲವು ಲ್ಯಾಬ್ಗಳಿಗೆ ಕಳಿಸಿದ್ದೇವೆ. ಯಾರು ಕಳಿಸಿರೋದು ಚೆನ್ನಾಗಿರುತ್ತೋ, ಅದನ್ನು ಉಳಿಸಿಕೊಳ್ಳುತ್ತೇವೆ ಎಂದಿದ್ದಾರೆ ಕಿಶೋರ್.
ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಬಹುಪಾಲು ಶೂಟಿಂಗ್ ನಿಧನಕ್ಕೆ ಮುನ್ನವೇ ಮುಗಿದಿತ್ತು. ಒಂದು ಹಾಡು ಬ್ಯಾಲೆನ್ಸ್ ಇತ್ತು. ಅದನ್ನು ಚಿತ್ರತಂಡ ಡ್ರಾಪ್ ಮಾಡಿದೆ. ಅಲ್ಲದೆ ಚಿತ್ರದ ಕೊನೆಗೆ ಶಿವಣ್ಣ ಮತ್ತು ರಾಘವೇಂದ್ರ ರಾಜ್ಕುಮಾರ್ ಅವರನ್ನು ಪುಟ್ಟ ಪುಟ್ಟ ಪಾತ್ರಗಳ ಮೂಲಕ ಎಂಟ್ರಿ ಕೊಡಿಸಲಾಗಿದೆ. ಆ ಮೂಲಕ ರಾಜ್ಕುಮಾರ್ ಸೋದರರನ್ನು ಒಂದೇ ಚಿತ್ರದಲ್ಲಿ ನೋಡಬೇಕು ಎನ್ನುವ ಅಭಿಮಾನಿಗಳ ಆಸೆಯನ್ನೂ ಈಡೇರಿಸುವ ಪ್ರಯತ್ನ ಮಾಡಲಾಗಿದೆ.