ವಿಕ್ರಾಂತ್ ರೋಣ ರಿಲೀಸ್ ಆಗೋಕೆ ಸಿದ್ಧವಾಗಿತ್ತು. ಆದರೆ ದಿಢೀರನೆ ಶುರುವಾದ ವೀಕೆಂಡ್ ಕಫ್ರ್ಯೂ, 50:50 ರೂಲ್ಸ್ ಚಿತ್ರದ ಬಿಡುಗಡೆಯನ್ನು ಮುಂದೆ ಹಾಕುವಂತೆ ಮಾಡಿತು. ಇದೇ ವೇಳೆ ವಿಕ್ರಾಂತ್ ರೋಣ ಚಿತ್ರಕ್ಕೆ ಓಟಿಟಿಯಿಂದ 100 ಕೋಟಿ ಆಫರ್ ಬಂದಿದೆಯಂತೆ ಅನ್ನೋ ಸುದ್ದಿ ಹೊರಬಿತ್ತು. ಹಾಗಾದರೆ ಸಿನಿಮಾ ಥಿಯೇಟರಿಗೆ ಬರುತ್ತಾ? ಇಲ್ವಾ? ಮೊಬೈಲಿನಲ್ಲೇ ವಿಕ್ರಾಂತ್ ರೋಣ ನೋಡಬೇಕಾ? ಎಂದು ಗೊಂದಲದಲ್ಲಿದ್ದವರಿಗೆ ನಿರ್ಮಾಪಕ ಜಾಕ್ ಮಂಜು ಸ್ಪಷ್ಟ ಉತ್ತರ ಕೊಟ್ಟಿದ್ದಾರೆ.
100 ಕೋಟಿ ಆಫರ್ ಬಂದಿದ್ದು ನಿಜ. ಆದರೆ ನಾವು ಚಿತ್ರವನ್ನು ಥಿಯೇಟರಿನಲ್ಲೇ ರಿಲೀಸ್ ಮಾಡೋಕೆ ನಿರ್ಧರಿಸಿದ್ದೇವೆ. ಚಿತ್ರವನ್ನು 3ಡಿಯಲ್ಲಿ ರೂಪಿಸಿದ್ದೇವೆ. ಅಂತಾ ಚಿತ್ರವನ್ನು ಓಟಿಟಿಯಲ್ಲಿ ನೋಡಿದರೆ ಪ್ರೇಕ್ಷಕರಿಗೆ ಥ್ರಿಲ್ ಸಿಗೋದಿಲ್ಲ. ಆ 3ಡಿ ಥ್ರಿಲ್‍ನ್ನು ಥಿಯೇಟರಿನಲ್ಲೇ ಕೊಡಬೇಕು ಎಂಬ ಕಾರಣಕ್ಕೆ ವಿಕ್ರಾಂತ್ ರೋಣ ಚಿತ್ರಕ್ಕೆ ಬಂದ 100 ಕೋಟಿ ಆಫರ್ ತಿರಸ್ಕರಿಸಿದ್ದೇವೆ ಅನ್ನೋದು ಜಾಕ್ ಮಂಜು ಮಾತು.
ನಿರ್ಮಾಪಕರ ಜೊತೆಗೆ ಸುದೀಪ್ ನಿಂತಿದ್ದಾರೆ. 14 ಭಾಷೆಗಳಲ್ಲಿ ಬರುತ್ತಿರೋ ಸಿನಿಮಾ ವಿಕ್ರಾಂತ್ ರೋಣ. ಯಾವುದೇ ಅಡೆತಡೆ ಬಾರದೆ ಹೋದರೆ ಏಪ್ರಿಲ್‍ನಲ್ಲಿ ಸಿನಿಮಾ ಬಿಡುಗಡೆಯಾಗೋ ಸಾಧ್ಯತೆ ಇದೆ. ಆದರೆ ಅಲ್ಲಿ ಒಂದು ಪ್ರಾಬ್ಲಂ ಇದೆ. ಏಪ್ರಿಲ್‍ನಲ್ಲಿಯೇ ಕೆಜಿಎಫ್ ಚಾಪ್ಟರ್ 2 ಮತ್ತು ಹಿಂದಿಯ ಲಾಲ್ ಸಿಂಗ್ ಚಡ್ಡಾ ಕೂಡಾ ಬರುತ್ತಿದೆ. ಅದೇ ತಿಂಗಳು ತೆಲುಗಿನಲ್ಲಿ ಚಿರಂಜೀವಿಯ ಆಚಾರ್ಯ, ಮಹೇಶ್ ಬಾಬು ಅಭಿನಯದ ಸರ್ಕಾರಿ ವಾರು ಪಾಟ ರಿಲೀಸ್ ಆಗುತ್ತಿದೆ.
ರಿಲೀಸ್ ಡೇಟ್ ಮುಂದೆ ಹಾಕಿಕೊಂಡಿದ್ದ ಆರ್‍ಆರ್‍ಆರ್ ರಿಲೀಸ್ ಡೇಟ್ ಯಾವಾಗ ಅನ್ನೋದು ಫಿಕ್ಸ್ ಆಗಿಲ್ಲ. ಒಂದೋ ಎರಡೋ ಪೈಪೋಟಿಯಾದರೆ ಓಕೆ. ಇಷ್ಟು ದೊಡ್ಡ ಚಿತ್ರಗಳ ನಡುವೆ ರಿಸ್ಕ್ ಯಾಕೆ ಎಂದುಕೊಂಡರೆ ವಿಕ್ರಾಂತ್ ರೋಣ ರಿಲೀಸ್ ಇನ್ನೊಂದಿಷ್ಟು ಲೇಟ್ ಆಗಿ ಬರಬಹುದು.