ಡಾಲಿ ಧನಂಜಯ್, ಅನುಮಾನವಿಲ್ಲದೆ ಹೇಳಬಹುದಾದರೆ 2021ನ್ನು ಧನಂಜಯ್ ವರ್ಷವೆನ್ನಬೇಕು. ಏಕೆಂದರೆ ವರ್ಷವಿಡೀ ಸಂಭ್ರಮಿಸಿದ ನಾಯಕ ನಟ ಡಾಲಿ ಧನಂಜಯ್. ವರ್ಷದ ಆರಂಭದಲ್ಲಿ ಕೊರೊನಾ ಬಿಕ್ಕಟ್ಟಿನ ನಡುವೆ ಚಿತ್ರರಂಗವೇ ತಲ್ಲಣಿಸುತ್ತಿದ್ದಾಗ ಗೆಲುವಿನ ಸರಮಾಲೆ ತೊಟ್ಟವರು ಡಾಲಿ. 2021ರ ಕೊನೆಯಲ್ಲಿ ರಿಲೀಸ್ ಧನಂಜಯ್ ಅಭಿನಯದ ಬಡವ ರಾಸ್ಕಲ್ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಅಲ್ಲಿ ಅವರು ನಿರ್ಮಾಪಕರಾಗಿಯೂ ಗೆದ್ದಿದ್ದಾರೆ.
ತೆಲುಗಿನ ಪುಷ್ಪ ಕೂಡಾ ವರ್ಷದ ಆಲ್ ಇಂಡಿಯಾ ಬ್ಲಾಕ್ ಬಸ್ಟರ್ ಲಿಸ್ಟ್ ಸೇರಿದೆ. ಅಲ್ಲಿಯೂ ಜಾಲಿ ರೆಡ್ಡಿಯಾಗಿ ಗೆದ್ದಿದ್ದಾರೆ ಡಾಲಿ. ಇದರ ನಡುವೆ ವರ್ಷದ ಇನ್ನೆರಡು ಹಿಟ್ ಚಿತ್ರಗಳಾದ ಸಲಗ ಮತ್ತು ಯುವರತ್ನ ಚಿತ್ರದಲ್ಲಿ ಡಾಲಿ ಗೆಲುವಿನ ನಗು ಬೀರಿದ್ದರು. ಇದರ ನಡುವೆ ರತ್ನನ್ ಪ್ರಪಂಚ ಒಟಿಟಿಯಲ್ಲಿ ಗಿಚ್ಚಗಿಲಿಗಿಲಿ ಸದ್ದು ಮಾಡಿತ್ತು. ಇದರ ನಡುವೆ 2022 ಸಂಪೂರ್ಣ ಡಾಲಿ ವರ್ಷವಾಗಲಿದೆ ಎನ್ನುವ ನಿರೀಕ್ಷೆ ಹುಟ್ಟಿಸಿದೆ.
ಡಾಲಿ 25ನೇ ಚಿತ್ರ ಹೊಯ್ಸಳ ಶುರುವಾಗಿದೆ. ಈ ಚಿತ್ರಕ್ಕೆ ಹೊಂಬಾಳೆ ಫಿಲಮ್ಸ್ನ ವಿಜಯ ಕಿರಗಂದೂರು ಹಾರೈಕೆ ಇದೆ. ಕೆಆರ್ಜಿ ಸ್ಟುಡಿಯೋಸ್ನ ಕಾರ್ತಿಕ್ ಗೌಡ ಮತ್ತು ಯೋಗಿ ಬಿ.ರಾಜ್ ನಿರ್ಮಾಪಕರಾಗುತ್ತಿದ್ದಾರೆ. ರತ್ನನ್ ಪ್ರಪಂಚ ನಂತರ ಡಾಲಿ, ಕಾರ್ತಿಕ್ ಮತ್ತು ಯೋಗಿ ಜೋಡಿ ಮತ್ತೆ ಒಂದಾಗಿದೆ. ಗೀತಾ ಚಿತ್ರ ನಿರ್ದೇಶಿಸಿದ್ದ ವಿಜಯ್ ಈ ಚಿತ್ರಕ್ಕೆ ಡೈರೆಕ್ಟರ್. ಹೊಯ್ಸಳದಲ್ಲಿ ಡಾಲಿ ಇನ್ಸ್ಪೆಕ್ಟರ್ ಪಾತ್ರಧಾರಿಯಂತೆ.
ಇದರ ನಡುವೆ ಅವರೇ ನಿರ್ಮಾಪಕರಾಗಿರೋ ಹೆಡ್ ಬುಷ್ ಶೂಟಿಂಗ್ನಲ್ಲಿದೆ. ಇದೆಲ್ಲದರ ಜೊತೆ ಇರುವ ಚಿತ್ರಗಳ ಲಿಸ್ಟ್ ನೋಡಿ. ಬೈರಾಗಿಯಲ್ಲಿ ಮತ್ತೊಮ್ಮೆ ಶಿವಣ್ಣನ ಜೊತೆ, ಮಾನ್ಸೂನ್ ರಾಗ, ಒನ್ಸ್ ಅಪಾನ್ ಎ ಟೈಂ ಇನ್ ಜಮಾಲಿಗುಡ್ಡ, 21 ಅವರ್ಸ್ ಮತ್ತು ತೆಲುಗಿನ ಪುಷ್ಪ ದಿ ರೂಲ್ ಲಿಸ್ಟ್ನಲ್ಲಿವೆ. ಸ್ಸೋ.. 2022 ಕೂಡಾ ಡಾಲಿ ವರ್ಷವಾಗುವ ನಿರೀಕ್ಷೆ ಹುಟ್ಟಿಸಿದೆ.