ಸಂಜಯ್ ದತ್ ಕೆಜಿಎಫ್ ಚಾಪ್ಟರ್ 2ನಲ್ಲಿ ಅಧೀರನಾಗಿ ನಟಿಸುತ್ತಿರೋದು ಗೊತ್ತಿದೆ ತಾನೇ. ಹಿಂದಿ ಹೊರತುಪಡಿಸಿ ಸಂಜಯ್ ದತ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ನಟಿಸಿರೋ ಸಿನಿಮಾ ಕೆಜಿಎಫ್ ಚಾಪ್ಟರ್ 2. ಅಫ್ಕೋರ್ಸ್, ಇದು ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಮಾತು ಬೇರೆ. ಈ ಚಿತ್ರದಲ್ಲಿ ಸಂಜಯ್ ದತ್ ಈ ಹಿಂದೆ ಕಾಣಿಸಿಕೊಳ್ಳದೇ ಇರೋ ಗೆಟಪ್ಪಿನಲ್ಲಿ ನಟಿಸಿದ್ದಾರೆ. ಚಿತ್ರದ ಇನ್ನೂ ಒಂದು ವಿಶೇಷ ಸ್ವಲ್ಪ ಮಾತ್ರ ಹೊರಬಿದ್ದಿದೆ.
ಚಿತ್ರದಲ್ಲಿ ಡ್ಯೂಪ್ಗಳನ್ನು ಬಳಸದೆ ಸ್ಟಂಟ್ ಮಾಡಿದ್ದಾರಂತೆ. ಚಿತ್ರೀಕರಣದ ವೇಳೆ ಸಂಜಯ್ ದತ್ ಅವರ ಆರೋಗ್ಯವೂ ಕೆಟ್ಟಿತ್ತು. ಸುದೀರ್ಘ ಚಿಕಿತ್ಸೆ ಪಡೆದುಕೊಂಡಿದ್ದರು. ಜೊತೆಗೆ ವಯಸ್ಸು. ಹೀಗಾಗಿ ಚಿತ್ರತಂಡ ಸೇಫ್ಟಿ ದೃಷ್ಟಿಯಿಂದ ಬಾಡಿ ಡಬಲ್ ಬಳಸೋಕೆ ಪ್ಲಾನ್ ಮಾಡಿತ್ತಂತೆ. ಆದರೆ, ಚಿತ್ರದ ಕ್ವಾಲಿಟಿ ಇಷ್ಟು ಚೆನ್ನಾಗಿ ಬರುತ್ತಿರೋವಾಗ ಬಾಡಿ ಡಬಲ್ ಮಾಡೋದು ಬೇಡ. ಕ್ವಾಲಿಟಿ ಹಾಳಾಗುತ್ತೆ ಎಂದು ಸಂಜಯ್ ದತ್, ಇಡೀ ಚಿತ್ರತಂಡವನ್ನು ಒಪ್ಪಿಸಿದರಂತೆ.
ಸಂಜಯ್ ದತ್ ಆರೋಗ್ಯದ ಕಾರಣಕ್ಕಾಗಿ ಸಿಂಪಲ್ಲಾದ ಸ್ಟಂಟ್ ಸಂಯೋಜಿಸುವುದಕ್ಕೂ ಮುನ್ನಾಭಾಯ್ ಬೇಡ ಎಂದು ಹೇಳಿದರಂತೆ. ನಿರ್ದೇಶಕ ಪ್ರಶಾಂತ್ ನೀಲ್ ಜೊತೆ ಮಾತನಾಡಿ ನನಗೆ ಅವಮಾನ ಮಾಡಬೇಡಿ. ಪ್ರೇಕ್ಷಕರಿಗೂ ಮೋಸ ಮಾಡಬೇಡಿ. ಸ್ಟಂಟ್ ಎಷ್ಟೇ ಕಷ್ಟದ್ದಾಗಿರಲಿ, ನಾನು ಮಾಡುತ್ತೇನೆ ಎಂದು ಮನವೊಲಿಸಿದರಂತೆ. ಕೆಜಿಎಫ್ ಚಾಪ್ಟರ್ 2 ಏಪ್ರಿಲ್ 14ಕ್ಕೆ ರಿಲೀಸ್ ಆಗುತ್ತಿದೆ.